ರಾಯಚೂರು. ಜೆಸ್ಕಾಂ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಜೆಸ್ಕಾಂ ಮಹಿಳಾ ನೌಕರರ ಸಂಘ ಹಾಗೂ ವಿವಿಧ ಸಂಘಗಳ ಒಕ್ಕೂಟದಿಂದ ನಗರದ ವಾಲ್ಮಿಕಿ ವೃತ್ತದ ಹತ್ತಿರ ಜೆಸ್ಕಾಂನ 220 ಕೆವಿ ಸ್ವೀಕರಣ ಕೇಂದ್ರದ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಜೆಸ್ಕಾಂ ಮಹಿಳಾ ನೌಕರರ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿರುವುದು ಹೆಚ್ಚಾಗಿದೆ.
ಇತ್ತೀಚೆಗೆ ಸಿಂಧನೂರಿನಲ್ಲಿ ಮಹಿಳಾ ನೌಕರರ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿತ್ತು, ಅವರ ವಿರುದ್ಧ ಕ್ರಮ ವಹಿಸಲಾಗಿದೆ.
ರಾಯಚೂರಿನ ಸ್ವೀಕರಣ ಕೇಂದ್ರದಲ್ಲಿ ಆ.26 ರಂದು ಮೇಲಾಧಿಕಾರಿ ಎಇಇ ಶ್ರೀನಿವಾಸ ಅವರು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಎಇಇ ಶ್ರೀನಿವಾಸ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದರೂ ಸಹ ಇಲ್ಲಿಯವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಲೈಂಗಿಕ ಕಿರುಕುಳ ನೀಡಿ ಸೆ.12ರವರೆಗೆ ರಜೆಯಲ್ಲಿರುವ ಶ್ರೀನಿವಾಸ ಅವರು ಸೆ.13 ರಂದು ಕರ್ತವ್ಯಕ್ಕೆ ಪೊಲೀಸ್ ಮತ್ತು ಕೆಲ ಅನಾಮಿಕರೊಂದಿಗೆ ಹಾಜರಾಗುತ್ತಿರುವುದಕ್ಕೆ ಆಕ್ರೋಶಕ್ಕೆ ಕಾರಣವಾಗಿದೆ ಎಂದು ದೂರಿದರು.
ಈ ಕೂಡಲೇ ಎಇಇ ಶ್ರೀನಿವಾಸ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಂನ 220 ಕೆವಿ ಸ್ವೀಕರಣ ಕಚೇರಿಯ ನೌಕರರು ಭಾಗವಹಿಸಿದ್ದರು.