ರಾಯಚೂರು. ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಭೆ ಸಂವಾದ ನಡೆಸುವ ಮೂಲಕ ಜಿಲ್ಲಾಧಿಕಾರಿಗಳಾದ ಚಂದ್ರಶೇಖರ ನಾಯಕ ಎಲ್ ಅವರು ವಿಶೇಷ ಮುತುವರ್ಜಿ ವಹಿಸಿದ್ದರಿಂದ ರಾಯಚೂರು ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಬಹಳಷ್ಟು ಪ್ರಗತಿಯಾಗಿದೆ.
ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು, ಮೋಜಣಿ ಪ್ರಕರಣಗಳು, ಪಹಣಿ ತಿದ್ದುಪಡಿ ಪ್ರಕರಣಗಳನ್ನು ವಿಲೇವಾರಿ ಮಾಡುವಲ್ಲಿ ಪ್ರಗತಿ ಸಾಧಿಸಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಕೂಡ ವೇಗವಾಗಿ ನಡೆಯುತ್ತಿದೆ.
ರಾಯಚೂರು ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಕಳೆದ 6 ತಿಂಗಳಲ್ಲಿ ಜಿಲ್ಲೆಯ ಎಲ್ಲಾ ತಹಶೀಲ್ದಾರ ನ್ಯಾಯಾಲಯ, ಸಹಾಯಕ ಆಯುಕ್ತರ ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಹಲವಾರು ವರ್ಷಗಳಿಂದ ಬಾಕಿ ಇದ್ದ ಒಟ್ಟು 5852 ಪ್ರಕರಣಗಳ ಪೈಕಿ ಇಲ್ಲಿಯವರೆಗೆ 3174 ಪ್ರಕಣಗಳನ್ನು ವಿಲೇಗೊಳಿಸಿ ಪ್ರಗತಿ ಸಾಧಿಸಲಾಗಿದೆ. ಇನ್ನೂ ಬಾಕಿ ಉಳಿದ 2678 ಪ್ರಕರಣಗಳನ್ನು ಅವಧಿಗನುಗುಣವಾಗಿ ಆದ್ಯತೆಯ ಮೇರೆಗೆ ವಿಲೇಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ.
*ವಿವಿಧ ಪ್ರಕರಣಗಳು:* ಭೂ-ದಾಖಲೆಗಳ ಹಾಗೂ ಕಂದಾಯ ಇಲಾಖೆಯಲ್ಲಿ ಮೇ ಅಂತ್ಯಕ್ಕೆ ಒಟ್ಟು 22,137 ಮೋಜಣಿ ಪ್ರಕರಣಗಳು ಹಾಗೂ ಪಹಣಿ ತಿದ್ದುಪಡಿ ಪ್ರಕರಣಗಳು ಬಾಕಿ ಇದ್ದು, ತದ ನಂತರದ 6 ತಿಂಗಳಲ್ಲಿ 20,872 ಹೊಸ ಪ್ರಕರಣಗಳು ಸ್ವೀಕೃತಿಯಾಗಿ ಒಟ್ಟು 43,009 ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ ಇಲ್ಲಿಯವರೆಗೆ 24,643 ಪ್ರಕರಣಗಳನ್ನು ವಿಲೇ ಮಾಡಲಾಗಿದ್ದು, ಶೇಕಡಾವಾರು 57.29 ಪ್ರತಿಶತ ಪ್ರಗತಿ ಸಾಧಿಸಲಾಗಿದೆ. ಬಾಕಿ ಉಳಿದ ಪ್ರಕರಣಗಳನ್ನು ಮುಂಬರುವ ಮಾಹೆಗಳಲ್ಲಿ ಆದ್ಯತೆಯ ಮೇರೆಗೆ ವಿಲೇಗೊಳಿಸಲು ಕಂದಾಯ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ಚಂದ್ರಶೇಖರ ನಾಯಕ್ ಎಲ್ ಅವರು ತಿಳಿಸಿದ್ದಾರೆ.
*ಕಂದಾಯ ಗ್ರಾಮ ಪ್ರಕ್ರಿಯೆ:* ರಾಯಚೂರು ಜಿಲ್ಲೆಯಲ್ಲಿ 87 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಕೂಡ ವೇಗವಾಗಿ ನಡೆಯುತ್ತಿದೆ. ಅವುಗಳಲ್ಲಿ ಇದುವರೆಗೆ 43 ಗ್ರಾಮಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಬಾಕಿ ಉಳಿದ 44 ಗ್ರಾಮಗಳಲ್ಲಿ 8 ಗ್ರಾಮಗಳಿಗೆ ಈಗಾಗಲೇ 2ಇ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಉಳಿದ 36 ಗ್ರಾಮಗಳನ್ನು ಡಿಸೆಂಬರ್ ಅಂತ್ಯದೊಳಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಈಗಾಗಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ 43 ಗ್ರಾಮಗಳಲ್ಲಿ 7 ಗ್ರಾಮಗಳಿಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಉಳಿದ 36 ಗ್ರಾಮಗಳಲ್ಲಿ 19 ಗ್ರಾಮಗಳಿಗೆ ಹೊಸದಾಗಿ ಕಂದಾಯ ಗ್ರಾಮಗಳನ್ನಾಗಿ ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಾಕಿ ಉಳಿದ 17 ಗ್ರಾಮಗಳಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಲು ಪ್ರಸ್ತಾವನೆಗಳು ಸಿದ್ಧವಾಗಿದ್ದು ಶೀಘ್ರದಲ್ಲಿಯೇ ಮಾನ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
*ಜಿಲ್ಲಾಧಿಕಾರಿಗಳ ಪ್ರಕ್ರಿಯೆ*: ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಸಹಯೋಗದಲ್ಲಿ ಇತ್ತೀಚೆಗೆ ಕಂದಾಯ ವಿಷಯಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಸಭೆಯಲ್ಲಿ ನಿರ್ದೇಶನ ನೀಡಿದಂತೆ ಅಗತ್ಯ ಕ್ರಮ ವಹಿಸಲಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು, ಮೋಜಣಿ ಪ್ರಕರಣಗಳು, ಪಹಣಿ ತಿದ್ದುಪಡಿ ಪ್ರಕರಣಗಳು ಮತ್ತು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ವಿಷಯಗಳಲ್ಲಿ ಹೆಚ್ಚಿನ ಗಮನವಹಿಸಿ ಕ್ರಮವಹಿಸಲು ಕಳೆದ 6 ತಿಂಗಳು ಸತತವಾಗಿ ಜಿಲ್ಲೆಯ ಅಧೀನದಲ್ಲಿರುವ ಎಲ್ಲಾ ಕಂದಾಯ ಅಧಿಕಾರಿಗಳೊಂದಿಗೆ ನಿರಂತರ ವಿಡಿಯೋ ಸಂವಾದ ಹಾಗೂ ಸಭೆಗಳನ್ನು ನಡೆಸಿದ್ದರಿಂದ ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಚಂದ್ರಶೇಖರ ನಾಯಕ ಎಲ್ ಅವರು ಪ್ರತಿಕ್ರಿಯಿಸಿದ್ದಾರೆ.
Megha News > Local News > ರಾಯಚೂರು: ಕಂದಾಯ ಇಲಾಖೆಯ ಪ್ರಗತಿಗೆ ವೇಗ
ರಾಯಚೂರು: ಕಂದಾಯ ಇಲಾಖೆಯ ಪ್ರಗತಿಗೆ ವೇಗ
Tayappa - Raichur28/11/2023
posted on
Leave a reply