ಬೆಂಗಳೂರು: ವಿ.ಪಿ.ಸಿಂಗ್ ಅವರು ಮಂಡಲ್ ವರದಿ ಜಾರಿದ ಮಾಡಿದ ನಂತರ ಹಿಂದುಳಿದ ವರ್ಗಕ್ಕೆ ಲಭ್ಯವಾಗಿರುವ ಶೇ 27ರಷ್ಟು ಮೀಸಲಾತಿ ಪ್ರಮಾಣ, ಪೂರ್ಣವಾಗಿ ಸಿಗುತ್ತಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ ಅಭಿಪ್ರಾಯಪಟ್ಟರು.
‘ಗವಿಮಾರ್ಗ’ ಕೃತಿ ಬಿಡುಗಡೆ, ವಿ.ಪಿ.ಸಿಂಗ್ ಪ್ರಶಸ್ತಿ ಪ್ರದಾನ ಹಾಗೂ ‘ಮಂಡಲ್ ವರದಿ ಆಗಿದ್ದೇನು?’
ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಒಬಿಸಿಗೆ ನೀಡಿರುವ ಶೇ 27ರಷ್ಟು ಮೀಸಲಾತಿ ಪರಿಣಾಮಕಾರಿಯಾಗಿ ಸಿಗುವಂತೆ ನೋಡಿಕೊಳ್ಳಬೇಕು. ಆನಂತರ ಈ ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ದೆಯೇ ಎಂಬುದನ್ನು ತಿಳಿಯಬೇಕು. ಇವೆಲ್ಲ ತಿಳಿಯಬೇಕಾದರೆ ಜನಗಣತಿ, ಆರ್ಥಿಕ, ಸಾಮಾಜಿಕ ಸಮೀಕ್ಷೆಗಳನ್ನು ಮಾಡಬೇಕು’ ಎಂದು ವಿವರಿಸಿದರು.
‘ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳು ಶಾಶ್ವತ ಹಿಂದುಳಿದ ಆಯೋಗಗಳನ್ನು ರಚಿಸಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಳನ್ನು ನಡೆಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ’ ಎಂದು ತಿಳಿಸಿದರು.
‘ಗವಿಮಾರ್ಗ’ ಕೃತಿ ಕುರಿತು ಹಿರಿಯೂರು ಆದಿಜಾಂಬವ ಬೃಹನ್ಮಠದ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ದೇಶದಲ್ಲಿ ಶಿಕ್ಷಣ, ಆರೋಗ್ಯ, ಜ್ಞಾನ, ವಿಜ್ಞಾನ, ಸಾಮಾಜಿಕ ಸ್ಥಿತಿಯ ಅಪಸವ್ಯಗಳನ್ನು, ಏಳುಬೀಳುಗಳನ್ನು ಈ ಕೃತಿಯಲ್ಲಿ ಗಟ್ಟಿಯಾಗಿ ಕಟ್ಟಿಕೊಡಲಾಗಿದೆ’ ಎಂದು ತಿಳಿಸಿದರು.
‘1931ರ ನಂತರ ಜಾತಿ ಗಣತಿಯಾಗಿಲ್ಲ. ಎಲ್ಲ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಕಾಂತರಾಜ ಆಯೋಗ ತಯಾರಿಸಿದ ವರದಿ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಸಮಾಜದಲ್ಲಿ ಶೋಷಣೆಗೊಳಗಾದವರು, ಹಿಂದುಳಿದವರು ವರದಿ ಬಿಡುಗಡೆ ಮಾಡಿ ಎಂದರೆ, ಬಲಿಷ್ಠರು ವಿರೋಧಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಎಚ್.ಎಂ. ರೇವಣ್ಣ ಪುಸ್ತಕ ಬಿಡುಗಡೆ ಮಾಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಸಿದ್ದರಾಜು, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ, ಪತ್ರಕರ್ತರಾದ ಲಕ್ಷ್ಮಣ ಕೊಡಸೆ, ಗಂಗಾಧರ ಮೊದಲಿಯಾರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಹಿಂದುಳಿದ ಜಾತಿಗಳ ಒಕ್ಕೂಟದ ಮಾಜಿ ಗೌರವಾಧ್ಯಕ್ಷ ಬಿ.ಕೆ. ರವಿ ಅವರನ್ನು ವಿ.ಪಿ.ಸಿಂಗ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾಂಗ್ರೆಸ್ ಮುಖಂಡ ವಿ.ಆರ್. ಸುದರ್ಶನ್, ಮಾಜಿ ಸಚಿವ ಎಚ್. ಆಂಜನೇಯ, ನಿವೃತ್ತ ಪ್ರಾಧ್ಯಾಪಕ ಮನೋಹರ್ ಯಾದವ್, ‘ಪ್ರಜಾಪ್ರಗತಿ’ ಪತ್ರಿಕೆ ಸಂಪಾದಕ ಎಸ್. ನಾಗಣ್ಣ, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಕೃತಿಕಾರ ಎಂ.ಎಸ್. ಮಣಿ, ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘದ ಅಧ್ಯಕ್ಷ ಕೆ.ಆರ್. ನೀಲಕಂಠ, ಐಎಚ್ಎಸ್ ಪ್ರಕಾಶನದ ಪ್ರಕಾಶಕ ಐ.ಎಚ್. ಸಂಗಮದೇವ ಇದ್ದರು.