ರಾಯಚೂರು. ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಒಂದೇ ರೀತಿಯ ಅವಕಾಶಗಳು, ಹಕ್ಕುಗಳು ಮತ್ತು ಕಟ್ಟುಪಾಡುಗಳನ್ನು ಅನುಭವಿಸುವಂತೆ ಮಾಡುವುದಾಗಿದೆ ಎಂದು ಮದ್ಲಾಪೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್. ಸುದರ್ಶನ ಅವರು ಅಭಿಪ್ರಾಯ ವ್ಯಕ್ತಪ ಡಿಸಿದರು.
ಮಾನವಿ ತಾಲೂಕಿನ ಚೀಕಲಪವಿ೯ ಗ್ರಾಮದಲ್ಲಿ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ತ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ -ಕೆ.ಎಸ್.ಆರ್.ಎಲ್.ಪಿ.ಎಸ್, ಜಿಲ್ಲಾ ಪಂಚಾಯತಿ ರಾಯಚೂರು, ತಾಲೂಕು ಪಂಚಾಯತಿ ಮಾನವಿ, ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣಾ ಘಟಕ, ಸಿರಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ, ಅಮೃತ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಮದ್ಲಾಪೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಲಿಂಗವು ದುರ್ಬಲತೆಯೊಂದಿಗೆ ಅದರ ಪರಸ್ಪರ ಸಂಬಂಧವನ್ನು ಹೊಂದಿದೆ. ಸಾಮಾಜಿಕವಾಗಿ ಲಿಂಗ ಭೇದವಿರುವುದರಿಂದ ಮಹಿಳೆಯರು ದುರ್ಬಲರಾಗಿದ್ದಾರೆ. ಮಹಿಳೆಯರಿಗೆ ಸಂಪನ್ಮೂಲಗಳು, ಆಸ್ತಿಗಳು, ಯೋಜನೆಗಳು, ಸೇವೆಗಳು, ಸಂಸ್ಥೆಗಳು, ಶಿಕ್ಷಣ, ಆರೋಗ್ಯ, ಶೋಷಣೆಯಿಂದ ರಕ್ಷಣೆ, ತಾರತಮ್ಯ, ರಾಜಕೀಯ ಭಾಗವಹಿಸುವಿಕೆ, ತನ್ನ ನಿಲುವನ್ನು ಸಮರ್ಥಿಸುವ ಕೌಶಲ್ಯಗಳು, ನಿರ್ಧಾರ ತೆಗೆದುಕೊಳ್ಳುವ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.
ಲಿಂಗತ್ವ ಸಮಾನತೆಯು ಮೂಲಭೂತವಾಗಿ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದೆ ಮತ್ತು ಎಲ್ಲರಿಗೂ ಇರುವಂತಹ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದಕ್ಕೆ ಪ್ರಮುಖವಾಗಿದೆ. ಮನೆ ಮತ್ತು ಮಕ್ಕಳ ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಕೆಲಸದಲ್ಲಿ ಮತ್ತು ಮನೆಯಲ್ಲಿ ಬಲವಂತ, ಬೆದರಿಕೆ ಮತ್ತು ಲಿಂಗತ್ವ ಆಧಾರಿತ ಹಿಂಸೆಯಿಂದ ಸಂಪೂರ್ಣವಾಗಿ ಮುಕ್ತವಾಗಿದ್ದಾಗ ಪುರುಷರು ಮತ್ತು ಮಹಿಳೆಯರ ನಡುವಿನ ಸಮಾನತೆ ಅಸ್ತಿತ್ವದಲ್ಲಿ ತರಲು ಸಾಧ್ಯವಾಗುತ್ತದೆ ಎಂದರು.
ಎನ್.ಆರ್.ಎಲ್.ಎಮ್ ಬ್ಲಾಕ್ ಮ್ಯಾನೇಜರ್ ಖಾಸಿಂ ಮಾತನಾಡಿ ಸಂಜೀವಿನಿಯನ್ನು ರಾಜ್ಯಾದ್ಯಂತ ಹಂತ ಹಂತವಾಗಿ ಜಾರಿಗೊಳಿಸಲು ಕರ್ನಾಟಕ ಸರ್ಕಾರವು ಡಿಸೆಂಬರ್ 2, 2011 ರಂದು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಬೆಂಬಲ ಸಂಸ್ಥೆ (ಕೆಎಸ್‌ಆರ್‌ಎಲ್‌ಪಿಎಸ್) ಯನ್ನು ರಚಿಸಿತು. ಸುಸ್ಥಿರ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಬಡತನವನ್ನು ನಿರ್ಮೂಲನೆ ಮಾಡುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ. ಇದು ಸುಸ್ಥಿರ ಜೀವನೋಪಾಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ವಲಯ ಮೇಲ್ವಿಚಾರಕ ಶರಣು ಬಸವ ಮಾತನಾಡಿ ಸಂಜೀವಿನಿಯು ಲಿಂಗತ್ವ ಸಂಬಂಧಿತ ಸಮಸ್ಯೆಗಳ ಕುರಿತು ಗ್ರಾಮೀಣ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಮತ್ತು ನಡವಳಿಕೆಯಲ್ಲಿ ಬದಲಾವಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಸಮುದಾಯ ಸಂಸ್ಥೆಗಳು ಮತ್ತು ಸಂಬಂಧಿತ ಸಹ ಇಲಾಖೆಗಳ ನಡುವೆ ಒಮ್ಮುಖತೆ ಮತ್ತು ಪಾಲುದಾರಿಕೆಯೊಂದಿಗೆ ತನ್ನ ಗುರಿಗಳನ್ನು ಪೂರೈಸುವ ಗುರಿಯನ್ನು ಸಂಜೀವಿನಿ ಹೊಂದಿದೆ ಎಂದರು. ಅಂಜೀನೇಯ ದೇವಾಸ್ಥಾನದಿಂದ ವೇದಿಕೆ ಕಾರ್ಯಕ್ರಮದ ವರೆಗೂ ಜಾಥಾವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಅಮೃತ ಸಂಜೀವಿನಿ ಜಿಪಿಎಲ್ಎಫ್ ಅಧ್ಯಕ್ಷ ಲಕ್ಷ್ಮೀ, ಖಜಾಂಚಿ ವೀರಭದ್ರಮ್ಮ, ಮುಖ್ಯೋಪಾಧ್ಯಾಯ ರಾಧಾ, ಮುಖ್ಯ ಪುಸ್ತಕ ಬರಹಗಾರ ಶಾರದಾ, ಎಲ್.ಸಿ.ಆರ್.ಪಿ ರಾಜೇಶ್ವರಿ, ಶ್ವೇತಾ, ಎನ್.ಎ.ಎಂ ಕಾರ್ಯಕರ್ತೆಯರ ಮಂಜುಳಾ, ಪಾಂಡು, ಅಂಗನವಾಡಿ ಕಾರ್ಯಕರ್ತೆಯರ ವೃಂದಾವನ ಬಾಯಿ, ಆಶಾ ಕಾರ್ಯಕರ್ತೆಯರ ಮಾತ೯ಮ್ಮ, ಫಾತಿಮಾ.ಬಿ, ಲಿಂಗತ್ವ ವೇದಿಕೆಯ ಪದಾಧಿಕಾರಿಗಳು, ಸ್ವ ಸಹಾಯ ಗುಂಪಿನ ಮಹಿಳೆಯರು ಭಾಗವಹಿಸಿದ್ದರು.