ರಾಯಚೂರು. ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ, 2023 ಅನ್ನು ಸಮಗ್ರವಾಗಿ ಪರಿಶೀಲಿಸಲು ರಚಿಸಲಾಗಿರುವ ಪರಿಶೀಲನಾ ಸಮಿತಿಯ ಅಧ್ಯಕ್ಷ ಹಾಗೂ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ್ ಅವರು ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ ನೀಡಿ ವರ್ತಕರ, ಅಧಿಕಾರಿಗಳ ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ಸಂವಾದ ಸಭೆಯನ್ನು ನಡೆಸಿದರು.
ಇದೇ ವೇಳೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಸಮಸ್ಯೆಗಳ ಕುರಿತು ಹಾಗೂ ಮಾರುಕಟ್ಟೆ ತಿದ್ದುಪಡಿ ಖಾಯ್ದೆಯ ಕುರಿತು ಸಲಹೆ ಸೂಚನೆಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸಿದರು.
ಎಪಿಎಂಸಿಗಳಲ್ಲಿ ರೈತರಿಗೆ, ವರ್ತಕರಿಗೆ ಹಾಗೂ ಹಮಾಲರಿಗೆ ಯಾವುದೇ ತೊಂದರೆಯಾಗದAತೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಜೊತೆಗೆ ರೈತರಿಗೆ ಯಾವುದೇ ಸಮಸ್ಯೆಗಳು ಉಂಟಾದಲ್ಲಿ ಅವುಗಳನ್ನು ಪರಿಹರಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಪರಿಹರಿಸುವಲ್ಲಿ ಎಲ್ಲಾ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಎಪಿಎಂಸಿ ಮತ್ತು ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ತಪ್ಪು ಮಾಡಿದ್ದರಿಂದ ಈ ಸಮಸ್ಯೆ ಉದ್ಬವವಾಗಿದೆ. ಎಪಿಎಂಸಿಗಳಲ್ಲಿ ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಲೈಸನ್ಸ್ ದಾರರು ಅಂಗಡಿ ಪಡೆದು ಬಾಡಿಗೆ ಕೊಟ್ಟಿದ್ದಾರೆ. ಅಂಥವರ ಲೈಸನ್ಸ್ ರದ್ದು ಮಾಡುವುದಾಗಿ ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೃಷಿ ಚಟುವಟಿಕೆಗಳು ನಡೆಯಬೇಕು ಎಂಬುದು ಸರಕಾರದ ಉದ್ದೇಶವಾಗಿದ್ದು, ಎಪಿಎಂಸಿ ಕಾಯ್ದೆ ಜಾರಿಗೆ ಬಗ್ಗೆ ವಿಧಾನಪರಿಷತ್ ಸದಸ್ಯರ ಅಧ್ಯಯನ ತಂಡ ಕೋಲಾರ ಶಿವಮೊಗ್ಗ, ಕಲಬುರಗಿ ಮತ್ತು ರಾಯಚೂರು ಎಪಿಎಂಸಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ದದ್ದಲ್, ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ, 2023 ಅನ್ನು ಸಮಗ್ರವಾಗಿ ಪರಿಶೀಲಿಸಲು ರಚಿಸಲಾಗಿರುವ ಪರಿಶೀಲನಾ ಸಮಿತಿಯ ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ಅರುಣ, ಕೇಶವ ಪ್ರಸಾದ್, ತಿಪ್ಪೇಸ್ವಾಮಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷ ಬಷೀರ ಆಹ್ಮದ್, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ ಸೇರಿದಂತೆ ಇನ್ನಿತರರು ಉಪಸ್ಥತರಿದ್ದರು. ಮತ್ತಿತರರಿದ್ದರು.