ರಾಯಚೂರು: ದರ್ಶನ್ ಅಭಿನಯದ ಕಾಟೇರ ಸಿನಿಮಾವನ್ನು ಪೈರಸಿ ಮಾಡುತ್ತಿದ್ದ ಆರೋಪಿಯನ್ನು ಪೋಲಿಸರು ಖಚಿತ ಮಾಹಿತಿ ಮೇರೆಗೆ ಬಂಧಿಸಿದ್ದಾರೆ.
ಬಂಧಿತ ಆರೋಪಿ ದೇವದುರ್ಗ ತಾಲ್ಲೂಕಿನ ಗಂಗಾನಾಯಕ್ ತಾಂಡದ ಮೌನೇಶ್ ಎಂದು ತಿಳಿದು ಬಂದಿದೆ.ಡಿ.29ರಂದು ಬಿಡುಗಡೆಯಾದ ಕಾಟೇರ ಸಿನಿಮಾ ರಾಯಚೂರಿನಲ್ಲಿ ಪ್ರದರ್ಶನ ನಡೆಯುತ್ತಿದೆ.
ಸಿನಿಮಾವನ್ನು ಪೈರಸಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕ ರಾಕ್ಲೈನ್ ವೆಂಕಟೇಶ ಅವರ ಸೂಚನೆ ಮೇರೆಗೆ ಜ.2ರಂದು ಕಲ್ಯಾಣ ಕರ್ನಾ ಟಕ ಭಾಗದ ವಿತರಕ ಗುರು ದೇಶಪಾಂಡೆ ರಾಯಚೂರಿಗೆ ಬಂದು ವಿಚಾರಿಸಿದ್ದಾರೆ.
ಆರೋಪಿ ಮೌನೇಶ ಫೋನ್ ಪೇ ಮೂಲಕ ಚಿತ್ರವೊಂದಕ್ಕೆ ₹40 ಪಡೆದು ಟೆಲಿಗ್ರಾಂ ಆಯಪ್ ಮೂಲಕ ಚಿತ್ರದ ಲಿಂಕ್ ಹಾಕುತ್ತಿರುವುದು ಧೃಢವಾಗಿದೆ. ಈ ಮಾಹಿತಿಯ ಆಧಾರದ ಮೇಲೆ 3ರಂದು ವಾದಿರಾಜ ಎಂಬುವವರು ಸದರ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲಿಸರು ಆರೋಪಿಯನ್ನು ಬಂಧಿಸಿದ್ದಾರೆ.
ತನಿಖೆ ನಡೆಸುತ್ತಿರುವ ಪೊಲೀಸರು ಪ್ರಕರಣದ ಕಿಂಗ್ ಪಿನ್ ಉಪೇಂದ್ರ ಎನ್ನುವವನಿಗಾಗಿ ಶೋಧ ನಡೆಸಿದ್ದಾರೆ ಚಿತ್ರ ಬಿಡುಗಡೆಯಾದಾಗಿನಿಂದ ಕಾಟೇರಾ ಚಿತ್ರ ಪೈರಸಿಯಾಗುತ್ತಿರುವ ಕಾರಣ ನಿರ್ಮಾಪಕ ರಾಕ್ಲೈನ್ ವೆಂಕಟೇಶ ಹಾಗೂ ವಿತರಕ ಗುರುದೇಶಪಾಂಡೆ ಹಾಗು ಜಗದೀಶಗೆ ಆರ್ಥಿಕ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಕಾಪಿ ರೈಟ್ ಆಕ್ಟ್ 1957 ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ 420 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.