ರಾಯಚೂರು.ಎಲ್ಲಾ ಧರ್ಮಗಳು ಒಂದೇ ಆಗಿದ್ದು ಪ್ರಾಬಲ್ಯ ಮೆರೆಯಲು ಹೋಗಿ ಧರ್ಮಗಳನ್ನು ಒಡೆದಾಳುವದು ಸಂಬಂಧಗಳು ದೂರವಾಗಲು ಕಾರಣವಾಗುತ್ತಿವೆ ಎಂದು ರಂಭಾಪುರಿ ಜಗದ್ಗುರು ಡಾ.ವೀರ ಸೋಮವೇಶ್ವರ ಭಗತ್ಪಾದರು ಹೇಳಿದರು.
ಅವರಿಂದು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರಪೇಟೆ ಮಠದಿಂದ ಆಯೋಜಿಸಲಾಗಿದ್ದ ಶ್ರೀ ರಾಚೋಟಿ ಶಿವಾಚಾರ್ಯರ ಮಂಗಲ ಭವನ ಉದ್ಘಾಟನೆ ಹಾಗೂ ೧೦೦೮ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಂದೇಶ ನೀಡಿರುವ ವೀರಶೈವ ಸಮಾಜ ಎಲ್ಲರನ್ನೂ ಒಗ್ಗುಡಿಸುವ ಕೆಲಸ ಮಾಡುತ್ತಾ ಬಂದಿದೆ. ಆದರೆ ಉಪಜಾತಿಗಳು ಜಾತಿ ಪ್ರಾಬಲ್ಯ ಮೆರೆಯಲು ಹೋಗಿ ವಿಗಂಡಿಸಲಾಗುತ್ತಿದೆ. ಸಕಲಜೀವಿಗಳಿಗೆ ಲೇಸು ಬಗೆಯುವದೇ ಧರ್ಮವಾಗಿದೆ. ಧರ್ಮವನ್ನು ಒಡೆದು ವಿಂಗಡನೆಯಾದರೆ ಭವಿಷ್ಯದ ಪೀಳಿಗೆ ನೋವಿಗೆ ಗುರಿಯಾಗಬೇಕಾಗುತ್ತದೆ. ಧರ್ಮದ ದಾರಿಯಲ್ಲಿ ನಡೆಯುವಂತೆ ಸಂತರು,ಶರಣರು, ದಾರ್ಶನಿಕರು ಸಂದೇಶ ನೀಡಿರುವ ಇತಿಹಾಸವಿದೆ. ಜನರಿಗೆ ಒಳಿತು ಮಾಡುವ ವಿಜ್ಞಾನ ಬೇಕಿದೆ ಹೊರತು ವಿನಾಶದಂಚಿಗೆ ತಳ್ಳುವಕೆಲಸವಾಗಬಾರದು. ಜ್ಞಾನ,ವಿಜ್ಞಾನ ಜನರ ಶ್ರೇಯೋಭಿವೃದ್ದಿಗೆ ಪೂರಕವಾಗಬೇಕಿದೆ. ಆದರೆ ಇಂದು ಧರ್ಮ ಒಡೆಯುವದು, ಅಪಚಾರ ಮಾಡುವದು ಹೆಚ್ಚುತ್ತಿರುವದು ಕಳವಳಕಾರಿ ಎಂದರು. ಧರ್ಮ ಧರ್ಮಗಳು ಒಂದಾಗಿ ಮುನ್ನಡೆದ ಮಾತ್ರ ಸಶಕ್ತ, ಸದೃಢ ಭಾರತ ಕಟ್ಟಲು ಕಾರಣವಾಗುತ್ತದೆ. ಯಾವುದೇ ಸಿದ್ದಾಂತ, ಸೈದ್ದಾಂತಿಕ ನಂಬಿಕೆಗಳು ಜನರ ಮನಸ್ಸು ಒಡೆಯಲು ಬಳಕೆಯಾಗಬಾರದು. ವಿವಿಧತೆಯಲ್ಲಿ ಏಕತೆ ಹೊಂದಿರುವ ಸಂಸ್ಕೃತಿ ನಮ್ಮದು. ಇಲ್ಲಿ ಬೇರೆ ಬೇರೆ ಧರ್ಮ,ಜಾತಿಯವರಿದ್ದರೂ ಏಕತೆಯನ್ನು ಬಿಟ್ಟುಕೊಡಬಾರದು, ಕೆಲ ಶಕ್ತಿಗಳು ಒಡೆಯುವ ಕೆಲಸ ಮಾಡಿದರೂ ಎಚ್ಚರಿಕೆವಹಿಸಬೇಕಿದೆ. ಧರ್ಮಕ್ಕೆ ಅಪಚಾರ ಮಾಡಿದವರು ಯಾರು ಉಳಿದಿಲ್ಲ. ವೀರಶೈವ ಸಮಾಜಕ್ಕೆ ಪಂಚಪೀಠಗಳು ಮಾರ್ಗದರ್ಶಕವಾಗಿ ಕಾರ್ಯನಿರ್ವಹಿಸುತ್ತಿವೆ. ಜಾತಿ,ಮತ,ಪಂಥಗಳನ್ನೇದ ಎಲ್ಲರೊಂದಿಗೆ ಪ್ರೀತಿಯ ಭಾವನೆಯೊಂದಿಗೆ ಹೆಜ್ಜೆಯಿಡಬೇಕಿದೆ. ಶಾಂತಿ,ಸಂಮೃದ್ದಿಯೊಂದಿಗೆ ಬದುಕು ಕಟ್ಟಿಕೊಳ್ಳಬೇಕಿದೆ ಎಂದರು.