ಸಿಂಧನೂರು: ಗಿಣಿಗೇರಾ- ರಾಯಚೂರು ಹೊಸ ರೈಲ್ವೆ ಯೋಜನೆ ವ್ಯಾಪ್ತಿಯಲ್ಲಿರುವ ಕಾರಟಗಿ- ಸಿಂಧನೂರು ರೈಲ್ವೆ ಮಾರ್ಗ ಹಾಗೂ ನಿಲ್ದಾಣಗಳಿಗೆ ಬುಧವಾರ ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ. ಚೌದರಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿ ತಪಾಸಣೆ ನಡೆಸಿತು.
ಪ್ರಯೋಗಾರ್ಥವಾಗಿ ಸಂಚಾರಕ್ಕೆ ಬಿಟ್ಟಿದ್ದ ರೈಲು ಮಧ್ಯಾಹ್ನ 1 ಗಂಟೆಗೆ ಸಿಂಧನೂರಿನ ರೈಲು ನಿಲ್ದಾಣಕ್ಕೆ ತಲುಪಿತು.
ಅದರಲ್ಲಿ ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ.ಚೌದರಿ ಸೇರಿದಂತೆ ಸುಮಾರು ವಿವಿಧ ವಿಭಾಗಗಳ 200ಕ್ಕೂ ಅಧಿಕ ತಂತ್ರಜ್ಞರು, ಸಹಾಯಕರು ಜೊತೆಗಿದ್ದರು. ನೂತನ ರೈಲು ನಿಲ್ದಾಣ ಹಾಗೂ ಪರೀಕ್ಷಾರ್ಥ ರೈಲಿನಲ್ಲಿ ತಂತ್ರಜ್ಞಾನದ ಸಾಮಗ್ರಿಗಳನ್ನು ಅಳವಡಿಸಲಾಯಿತು.
ನಂತರ ರೈಲಿಗೆ ಪೂಜೆ ಸಲ್ಲಿಸಿ, ಕುಂಬಳಕಾಯಿ ಅರ್ಪಿಸಲಾಯಿತು. ತದನಂತರ ಪರೀಕ್ಷಾರ್ಥವಾಗಿ ಗಂಟೆಗೆ 130 ಕಿ.ಮೀ ವೇಗದ ಮಿತಿಯಲ್ಲಿ ರೈಲು ಸಂಚಾರವನ್ನು ಸಿಂಧನೂರಿನಿಂದ ಕಾರಟಗಿವರೆಗೆ ಎರಡು ಬಾರಿ ನಡೆಸಿ ರೈಲ್ವೆ ಹಳಿಯ ತಪಾಸಣೆ ಮಾಡಿ ತಂತ್ರಜ್ಞಾನದ ಸಹಾಯದಿಂದ ಸಿಆರ್‌ಎಸ್, ಟ್ರ್ಯಾಕ್ ಸಿಇ ಮತ್ತಿತರರು ಸಿಬ್ಬಂದಿ ಮಾಹಿತಿ ಪಡೆದುಕೊಂಡು ತೆರಳಿದರು.