ರಾಯಚೂರು. 06-ರಾಯಚೂರು(ಪ.ಪಂ) ಲೋಕಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂಪಡೆಯುವ ದಿನವಾದ ಸೋಮವಾರದಂದು, ಇಬ್ಬರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ವಾಪಸ್ ತೆಗೆದುಕೊಂಡಿದ್ದು, ಅಂತಿಮ ಕಣದಲ್ಲಿ 8 ಅಭ್ಯರ್ಥಿಗಳು ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ತಿಳಿಸಿದ್ದಾರೆ.
ಏ.12 ರಿಂದ 19 ರವರೆಗೆ ನಾಮಪತ್ರ ಸಲ್ಲಿಕೆಯ ಅವಧಿಯಲ್ಲಿ ಒಟ್ಟು 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಏ.20 ರಂದು ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ 10 ಅಭ್ಯರ್ಥಿಗಳ ನಾಮಪತ್ರಗಳು ಕ್ರಮವಾಗಿದ್ದವು. ನಾಮಪತ್ರ ವಾಪಸ್ಸು ಪಡೆಯುವ ದಿನವಾದ ಇಂದು ಪಕ್ಷೇತರ ಅಭ್ಯರ್ಥಿಗಳಾದ ಕೆ.ದೇವಣ್ಣ ನಾಯಕ ಹಾಗೂ ನರಸಿಂಹ ನಾಯಕ ಕರಡಿಗುಡ್ಡ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.
ಉಳಿದಂತೆ ಅಂತಿಮ ಕಣದಲ್ಲಿ ಒಟ್ಟು 8 ಅಭ್ಯರ್ಥಿಗಳು ಉಳಿದಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಜಿ.ಕುಮಾರ ನಾಯಕ, ಬಹುಜನ ಸಮಾಜ ಪಾರ್ಟಿಯಿಂದ ಎಸ್.ನರಸಣ್ಣ ಗೌಡ ನಾಯಕ, ಬಿಜೆಪಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ರಾಜಾ ಅಮರೇಶ್ವರ ನಾಯಕ, ಕರ್ನಾಟಕ ರಾಷ್ಟ್ರ ಸಮಿತಿಯ ಬಸವಪ್ರಭು ಮೇದಾ, ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ರಾಮಲಿಂಗಪ್ಪ, ಭಾರತೀಯ ಜನ ಸಾಮ್ರಾಟ ಪಕ್ಷದ ಮೇದಾರ ಶಾಮರಾವ್, ಪಕ್ಷೇತರ ಅಭ್ಯರ್ಥಿಗಳಾದ ಅಮರೇಶ, ಹಾಗೂ ಯಲ್ಲಮ್ಮ ದಳಪತಿ ಅವರು ಅಂತಿಮ ಕಣದಲ್ಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.