ರಾಯಚೂರು. ಶ್ರಾವಣ ಮಾಸದ ಮೊದಲ ಸೋಮವಾರ ಹಾಗೂ ನಾಗರ ಪಂಚಮಿ ನಿಮಿ ತ್ತವಾಗಿ ನಾಗ ದೇವತೆಗಳಿಗೆ ಮಹಿಳೆಯರು ಕುಟುಂಬ ಸಮೇತವಾಗಿ ಆಗಮಿಸಿ ನಾಗ ದೇವತೆಗಳ ಮೂರ್ತಿಗಳಿಗೆ ಹಾಲೆರೆದು, ನೈವೇದ್ಯ ಸಮರ್ಪಿಸುವ ಮೂಲಕ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.
ನಗರದ ಪಾಲಮ್ಮ ದೇವಿ ದೇವಸ್ಥಾನ ಆವರಣ, ನಂದೀಶ್ವರ ದೇವಸ್ಥಾನ, ರಾಮ ಮಾತ ದೇವಸ್ಥಾನ, ರಾಮಲಿಂಗೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳ ಆವರಣದಲ್ಲಿ ನಾಗ ದೇವತೆ ಗಳಿಗೆ ಕುಟುಂಬ ಸಮೇತವಾಗಿ ಆಗಮಿಸಿ ಶೇಂಗಾ ಉಂಡಿ, ರವೆ ಉಂಡಿ, ಮಂಡಾಳು ಉಂಡಿ, ಎಳ್ಳುಂಡಿ, ಹೋಳಿಗೆ, ಶ್ಯಾವಿಗೆ ಪಾಯಸ, ಸಂಡಿಗೆ ಹಾಗೂ ಹಪ್ಪಳ ಸೇರಿ ವಿವಿಧ ಬಗೆಯ ಸಿಹಿ ಖಾದ್ಯಗಳನ್ನು ತಯಾರಿಸಿ ನಾಗಪ್ಪನಿಗೆ ಎಡೆ ನೀಡಿ ನಂತರ ಮನೆಯವರೆಲ್ಲಾ ಸೇರಿ ನಾಗ ದೇವತೆಗಳಿಗೆ ಹಾಲೆರೆದರು.
ತಾಲೂಕಿನ ಮನ್ಸಲಾಪೂರ ಗ್ರಾಮದಲ್ಲಿ ಆಂಜ ನೇಯ ದೇವಸ್ಥಾನ ಹಾಗೂ ಸಿದ್ದಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ನಾಗದೇವರಿಗೆ ನವ ಜೋಡಿಗಳು ಕೊಬ್ಬರಿ ಬಟ್ಟಲಿನಲ್ಲಿ ಹಾಲು ಬೆಲ್ಲವನ್ನಿಟ್ಟು ಹಾಲು ಮತ್ತು ನೀರನ್ನು ಎರೆಯುವ ಮೂಲಕ ನಾಗರ ಪಂಚಮಿ ಆಚರಿಸಿದರು.
ನಾಗರ ಮೂರ್ತಿಗಳಿಗೆ ಮಹಿಳೆಯರು, ಮಕ್ಕಳು, ಯುವತಿಯರು ಹಾಲೆರೆದು, ಸಿಹಿ ತಿಂಡಿಗಳ ನೈವೇದ್ಯ ಸಮರ್ಪಿಸಿದರು.
ನವ ಜೋಡಿಗಳು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.