ರಾಯಚೂರು. ಜಿಲ್ಲೆಯಲ್ಲಿ ಮಕ್ಕಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅನಿಷ್ಠ ಪದ್ಧತಿಗೆ ಸಿಲುಕಿದ ಮಕ್ಕಳ ರಕ್ಷಣೆ ಮಾಡಬೇಕು. ಯಾವುದೇ ಕಾರಣಕ್ಕೂ ಮಕ್ಕಳ ಹಕ್ಕು ಉಲ್ಲಂಘನೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ರಾಯಚೂರು ಉಸ್ತುವಾರಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ ಅವರು ಹೇಳಿದರು.
ನಗರದ ಪ್ರತಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಲೆಗಳಲ್ಲಿ ಮೂಲಸೌಕರ್ಯ, ಕಟ್ಟಡ, ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಮಾಡಬೇಕು. ಮಕ್ಕಳ ಹಾಜರಾತಿ ಕಡಿಮೆಯಾಗದಂತೆ ಆಗಾಗ ಮೇಲ್ವಿಚಾರಣೆ ನಡೆಸಬೇಕು. ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮೇಲೆ ದೌರ್ಜನ್ಯಗಳು ಕಂಡು ಬಂದಾಗ ಇತರ ಇಲಾಖೆಗಳ ಸಹಕಾರ ಪಡೆದು ಮಕ್ಕಳಿಗೆ ರಕ್ಷಣೆ ಒದಗಿಸಬೇಕು ಎಂದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಗಳಿಗೆ ಭೇಟಿ ನೀಡಿ, ಆರ್‌ಟಿಇ ಕಾಯ್ದೆಯಡಿ ನೋಂದಣಿಯಾಗಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಬೇಕು. ಮಕ್ಕಳನ್ನು ಶೈಕ್ಷಣಿಕ ವ್ಯವಸ್ಥೆಗೆ ಮರಳಿ ತರಲು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಶಾಲೆಯನ್ನು ತೊರೆದ ಮಕ್ಕಳನ್ನು ನಿಭಾಯಿಸಲು, ಅದನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಬೇಕೆಂದರು.
ಮಾಹಿತಿ ಸಂಗ್ರಹಿಸಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಹಾಗೂ ಬಾಲ್ಯವಿವಾಹ ತಡೆಗೆ ಕಾರ್ಯತಂತ್ರ ರೂಪಿಸಬೇಕು. ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ತಡೆಯಲು ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕು. ಮಕ್ಕಳನ್ನು ನಮ್ಮ ಮಕ್ಕಳಂತೆ ನೋಡಿಕೊಂಡರೆ ಮಾತ್ರ ದೌರ್ಜನ್ಯಕ್ಕೆ ಒಳಗಾಗುವ ಮಗುವಿಗೆ ನ್ಯಾಯ ಒದಗಿಸಲು ಸಾಧ್ಯ. ಮಕ್ಕಳ ಶಿಕ್ಷಣ, ರಕ್ಷಣೆ, ಪೋಷಣೆ, ಆರೋಗ್ಯದ ವೃದ್ಧಿಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಸಮಾಜದ ಸುಸ್ಥಿರ ಬೆಳವಣಿಗೆಗೆ ಸರ್ಕಾರದ ಕಾನೂನುಗಳ ಬಗ್ಗೆ ತಿಳಿದುಕೊಂಡು ಅದನ್ನು ಕಾರ್ಯರೂಪಕ್ಕೆ ತರಬೇಕು. ಬಾಲ್ಯವಿವಾಹಗಳಿಗೆ ಕಡಿವಾಣ ಹಾಕಬೇಕು. ಮಕ್ಕಳು ಶಾಲೆ ಬಿಡದರೀತಿ ನೋಡಿಕೊಳ್ಳಬೇಕು. ಮಕ್ಕಳು ವಿದ್ಯಾವಂತರಾದರೆ ಬಾಲ್ಯ ವಿವಾಹ ಕಡಿಮೆಯಾಗುತ್ತದೆ. ಪೋಕ್ಸೋ ಕಾಯ್ದೆ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು ಎಂದರು.
ಮಕ್ಕಳ ಪಾಲನೆ, ಪೋಷಣೆ, ರಕ್ಷಣೆಗೆ ಸಂಬಂಧಿಸಿ ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ನಾನಾ ಇಲಾಖೆಗಳು, ಸರಕಾರಿ, ಸರಕಾರೇತರ ಸಂಘ ಸಂಸ್ಥೆಗಳು ಸರಕಾರಿ ಹಾಗೂ ವಿದೇಶಿ ಅನುದಾನಿತ ಯೋಜನೆಗಳು, ಹಲವಾರು ಹಂತದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೂ ಮಕ್ಕಳು ಭಿಕ್ಷಾಟನೆಯಲ್ಲಿರುವುದು, ಅಪಾಯಕಾರಿ ಕ್ಷೇತ್ರಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿರುವುದು, ನಾನಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು, ಇದ್ದಕ್ಕಿದ್ದಂತೆ ಮಕ್ಕಳ ಸಾಗಣೆ ಮತ್ತು ಮಾರಾಟ ಜಾಲಕ್ಕೆ ಸಿಲುಕದಂತೆ ಕ್ರಮಕೈಗೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾದ ಮುದುಕಪ್ಪ ಹೆಚ್., ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಂಸ್ಥಿಕ ರಕ್ಷಣಾಧಿಕಾರಿ ಹನುಮೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಮೇಶ ಇದ್ದರು.