ರಾಯಚೂರು,ಡಿ.16: ತಾಲೂಕಿನ ರಬ್ಬಣಕಲ್ ಗ್ರಾಮದಲ್ಲಿ ಬಾಣಂತಿ ಈಶ್ವರಿ (32) ರಕ್ತಸ್ರಾವದಿಂದ ಶುಕ್ರವಾರ ಮೃತಪಟ್ಟಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರಗೊಂಡ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಸೋಮವಾರ ಮಟಮಾರಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬಾಣಂತಿ ಈಶ್ವರಿ ಸಾವು ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ವೈದ್ಯರನ್ನು ವಿಚಾರಿಸಿದಾಗ ಬೆಳಿಗ್ಗೆ 3ಗಂಟೆ ಮಟಮಾರಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದು, 3.50ಕ್ಕೆ ಸಹಜ ಹೆರಿಗೆ ಆಗಿರುತ್ತದೆ. ಅಲ್ಲದೆ ತಾಯಿ ಮತ್ತು ಮಗು ಆರೋಗ್ಯವಾಗಿರುತ್ತದೆ. ಡಿಸೆಂಬರ್ 10ರ ಸಂಜೆ 5ಗಂಟೆಗೆ ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್ ಆಗಿರುತ್ತಾರೆ. ಮನೆಯಲ್ಲಿ ಕೂಡ ಡಿಸೆಂಬರ್ 12ರವರೆಗೆ ಆರಾಮಾಗಿ ಇರುತ್ತಾರೆ. ಡಿಸೆಂಬರ್ 13ರಂದು ಇದ್ದಕ್ಕಿದ್ದಂತೆ ಅವರಿಗೆ ಉಸಿರಾಟ ತೊಂದರೆ ಹಿನ್ನೆಲೆಯಲ್ಲಿ ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದು, ಅವರಿಗೆ ವೈದ್ಯರು ಚಿಕಿತ್ಸೆಯನ್ನು ಸಹ ನೀಡಿರುತ್ತಾರೆ. ಅಲ್ಲಿಂದ ಆಂಬುಲೆನ್ಸ್ ಮೂಲಕ ರಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಅಲ್ಲಿಯೂ ಸಹ ಎಲ್ಲಾ ರೀತಿಯ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸು ನಿಗಿರುತ್ತಾರೆಂದು ಜಿಲ್ಲಾಧಿಕಾರಿಗಳಿಗೆ ವೈದ್ಯರು ಮಾಹಿತಿ ನೀಡಿದರು.
ಮಟಮಾರಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ವೈದ್ಯರ ಹಾಗೂ ಸಿಬ್ಬಂದಿಗಳ ಅವಶ್ಯಕತೆಯಿದ್ದು, ಆಸ್ಪತ್ರೆಗೆ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನು ನೇಮಿಸಬೇಕೆಂದು ಈ ವೇಳೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಆಸ್ಪತ್ರೆಯನ್ನು ಮೇಲ್ದಾರ್ಜೆಗೆ ಏರಿಸಲಾಗಿದ್ದು, ಮುಂದಿನ ದಿನಗಳಲ್ಲಿ ವೈದ್ಯರನ್ನು ಹಾಗೂ ಸಿಬ್ಬಂದಿಗಳನ್ನು ನೇಮಿಸಿ ಇಲ್ಲಿಯೇ ಹೆರಿಗೆ ಮಾಡುಸುವ ವ್ಯವಸ್ಥೆಯನ್ನು ಮಾಡಲಾಗುವುದೆಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಂ ಪಾಂಡ್ವೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ನಂದಿತಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ರಾಯಚೂರು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್, ಮಟಮಾರಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತೀಶ್ ಸೇರಿದಂತೆ ಇತರರು ಇದ್ದರು.