ರಾಯಚೂರು: ದರ್ವೇಶ್ ಗ್ರೂಪ್ನ ಬಹಕೋಟಿ ಹಣದ ವಂಚನೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಹನ್ನೆರಡನೇ ಆರೋಪಿಯನ್ನು ಭಾನುವಾರ ರಾತ್ರಿ ಬಂಧಿಸಿದ ಪೊಲೀಸರು ಸೋಮವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಪ್ರಕರಣದ 12ನೇ ಆರೋಪಿ ಅಸ್ಲಂ ದರ್ವೇಶ್ ಗ್ರೂಪ್ ನ ಏಜೆಂಟ್ ಆಗಿದ್ದ, ವಂಚನೆ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ, ರೈಲ್ವೆ ನಿಲ್ದಾಣದಿಂದ ಕಾರಿನಲ್ಲಿ ಓಡಾಡುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು. ಆರೋಪಿಯನ್ನು ಬಂಧಿಸಿದ್ದಾರೆ.
ನಗರದಲ್ಲಿ ದರ್ವೇಶ ಗ್ರೂಪ್ ಕಂಪನಿಯವರು ಸಾರ್ವಜನಿಕರಿಗೆ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಜನರಿಂದ ಬಹುಕೋಟಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ಹಣವನ್ನು ವಾಪಸ್ ನೀಡದೇ ಮೋಸ ಮಾಡಿರುವ ಬಗ್ಗೆ ಜು.22ರಂದು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿ ತನಿಖೆ ಕುರಿತು ವಹಿಸಿ ಪ್ರಕರಣದಲ್ಲಿ ಬಂಧಿತ ಆರೋಪಿತರಾದ ಬಬ್ಲೂ ಅಲಿಯಾಸ್ ಮಷ್ಯನ್ ತಾಮೀದ್ ಅಲಿ, ಅಜರ್ ಪಾಷ, ಸೈಯದ್ ಮೌಸಿನ್, ಶೇಖ್ ಮುಜಾಮಿಲ್ ಹಾಗೂ ಮಹ್ಮದ್ ವಸೀಂ ಅಲಿಯಾಸ್ ಮೆಡಿಕಲ್ ವಸೀಂ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಅಲ್ಲದೇ ತಲೆಮರೆಸಿಕೊಂಡ ಹಾಗೂ ಪ್ರಕರಣದ ಪ್ರಮುಖ ಆರೋಪಿತರಾದ ಮಹ್ಮದ್ ಹುಸೇನ್ ಶುಜಾ, ಸೈಯದ್ ವಸೀಂ ಹಾಗೂ ಸೈಯದ್ ಮಿಸ್ಕಿನ್ ಅವರು ಸಹ ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ನ್ಯಾಯಾಲಯವು ಆರೋಪಿತರು ಸಲ್ಲಿಸಿದ ಒಟ್ಟು 04 ಜಾಮೀನು ಅರ್ಜಿಗಳನ್ನು ಪರಿಶೀಲಿಸಿ ಆರೋಪಿತರ ಪರ ಮತ್ತು ಸರ್ಕಾರದ ಪರ ವಿಶೇಷ ಅಭಿಯೋಜಕರಾಗಿ ಮಸ್ಕಿ ನಾಗರಾಜ್ ಇವರನ್ನು ನಿಯೋಜಿಸಲಾಗಿತ್ತು. ನಾಗರಾಜ್ ಅವರಿಂದ ಸರ್ಕಾರದ ಪರ ವಾದ ಮಂಡಿಸಲಾಗಿತ್ತು. ಆರೋಪಿಗಳು ಸಲ್ಲಿಸಿದ್ದ ನಾಲ್ಕು ನಿರೀಕ್ಷಣಾ ಜಾಮೀನನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಇದೀಗ ಪ್ರಕರಣದ ಆರೋಪಿಗಳು ಒಬ್ಬೊಬ್ಬರಾಗಿ ಸಿಗುತ್ತಿದ್ದು, ಪ್ರಮುಖ ಆರೋಪಿ ಮಹ್ಮದ್ ಶುಜಾ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬುವುದು ಇದುವರೆಗೂ ತಿಳಿದುಬಂದಿಲ್ಲ.