ರಾಯಚೂರು: ಕ್ರೂಷರ್ ವಾಹನ ಪಲ್ಟಿಯಾದ ಪರಿಣಾಮ ಚಾಲಕ ಸೇರಿ ಮೂವರು ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಸಿಂಧನೂರು ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಮಂತ್ರಾಲಯದ ಗುರು ಸೌರ್ವಭೌಮ ಸಂಸ್ಕೃತ ವಿಧ್ಯಾಪೀಠದಲ್ಲಿ ಸಂಸ್ಕೃತ ವಿದ್ಯಾಭಾಸ ಮಾಡಿಕೊಂಡಿದ್ದು, ಕೊಪ್ಪಳ ಜಿಲ್ಲೆಯ ಆನೆಗುಂದಿ ಹತ್ತಿರ ನರಹರಿ ತೀರ್ಥರ 3 ದಿನಗಳ ಆರಾಧಾನೆ ಕಾರ್ಯಕ್ರಮಕ್ಕೆ ಕ್ರೂಷರ್ ವಾಹನದಲ್ಲಿ ಹೋಗುತ್ತಿದ್ದ ವೇಳೆ ಫಿರ್ಯಾದಿ ಮತ್ತು ವಿದ್ಯಾಪೀಠದ ಹಯವದನ(18), ಸುಜಯೇಂದ್ರ(22), ಅಭಿಲಾಷ(20) ಸೇರಿ ಕ್ರೂಷರ್ ಚಾಲಕ ಕಂಸಾಲಿ ಶಿವಾ(24) ಮೃತಪಟ್ಟಿದ್ದಾರೆ.
ಎಪಿ-21-ಟಿಬಿ-0743 ರಲ್ಲಿ ಹೊರಟಿರುವಾಗ ರಾಯಚೂರುನಿಂದ ಸಿಂಧನೂರು ಕಡೆಗೆ ಬರುವ ಮುಖ್ಯ ರಸ್ತೆಯಲ್ಲಿ ಸಿಂಧನೂರು ವೈಷ್ಣವಿ ದೇವಿ ಗುಡಿ ಕ್ರಾಸ್ ಹತ್ತಿರ ರಾತ್ರಿ 10:20ರ ವೇಳೆಗೆ ಚಾಲಕನು ವಾಹನವನ್ನು ಅತೀವೇಗವಾಗಿ ಚಲಾಯಿಸುತ್ತಿದ್ದರಿಂದ ಈ ಘಟನೆ ಸಂಭವಿಸಿದೆ ಎಂಬುವುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಚಾಲಕನು ವಾಹನದ ವೇಗವನ್ನು ನಿಯಂತ್ರಿಸಲು ಹೋಗಿ ವಾಹನದ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಪಲ್ಟಿಯಾಗಿ ಬಿದ್ದಿದ್ದರಿಂದ ವಾಹನದಲ್ಲಿದ್ದ ಶ್ರೀಹರಿ, ವಿಜಯೇಂದ್ರ, ಭರತ್, ರಾಘವೇಂದ್ರ, ತನೀಶ್, ಶ್ರೀಕಾರ್, ವಾಸುದೇವ, ಬಸವ ಶರ್ಮಾ, ರಾಘವೇಂದ್ರ ನಾರಾಯಣಪೇಟೆ, ಜಯಸಿಂಹ ಎಂಬ ಹತ್ತು ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.