ರಾಯಚೂರು.ದೇವಸೂಗೂರು ಗ್ರಾಮದಲ್ಲಿರುವ ಎಲ್ಲಾ ಅಂಗಡಿಗಳಿಗೆ ನೋಟೀಸ್ ನೀಡಿ ಕಸವನ್ನು ರಸ್ತೆಗೆ ಎರೆಚದೆ ಪ್ರತಿದಿನ ಗ್ರಾಮ ಪಂಚಾಯತಿಯ ಸ್ವಚ್ಛತಾ ವಾಹಿನಿಗೆ ನೀಡಿ ಸ್ವಚ್ಛತಾ ಕಾಪಾಡಲು ಹೆಚ್ಚಿನ ಗಮನಹರಿಸಬೇಕೆಂದು ಮಾನ್ಯ ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಾಂಡ್ವೆ ರಾಹುಲ್ ತುಕಾರಾಮ ರವರು ನಿರ್ದೇಶನ ನೀಡಿದರು.
ತಾಲೂಕಿನ ದೇವಸೂಗುರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೈದ್ರಾಬಾದ್ ಮುಖ್ಯ ರಸ್ತೆ ಬದಿಯಲ್ಲಿ ಬಿದ್ದಿರುವ ಘನತ್ಯಾಜ್ಯವನ್ನು ವಾರದಲ್ಲಿ ಎರಡು ಬಾರಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡಿ ಸ್ವಚ್ಛತಾ ಕಾಪಾಡಬೇಕೆಂದರು. ಇನ್ನೂ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಪ್ರತಿದಿನ ಕಸ ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಗ್ರಾಮದ ಎಲ್ಲಾ ಸಾರ್ವಜನಿಕರು ತಮ್ಮ ತಮ್ಮ ಏರಿಯಾಗಳಲ್ಲಿ ಮತ್ತು ರಸ್ತೆಯಲ್ಲಿ ಕಸವನ್ನು ಹಾಕದಂತೆ ನಿಮ್ಮ ಬಳಿ ಸಂಗ್ರಹಿಸಿಕೊಂಡು ಸ್ವಚ್ಛತಾ ವಾಹಿನಿಗೆ ಹಸಿ ಮತ್ತು ಒಣ ಕಸವನ್ನು ವಿಂಗಡಣೆ ಮಾಡಬೇಕು. ಚರಂಡಿಯಲ್ಲಿ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಹಾಕದಂತೆ ನಿಗಾವಹಿಸಬೇಕೆಂದು ಸಂಬಂಧಿಸಿದ ಸಿಬ್ಬಂದಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯತಿಯ ಘನತ್ಯಾಜ್ಯ ವಿಲೇವಾರಿ ಮಾಡುವ ಸಿಬ್ಬಂದಿಯು ಪ್ರತಿ ದಿನ ಸಾರ್ವಜನಿಕರಲ್ಲಿ ಸ್ವಚ್ಛತಾ ಕಾಪಾಡಲು ಜಾಗೃತಿ ಮೂಡಿಸಬೇಕು ಮತ್ತು ಅಂಗಡಿ ಮುಂಗಟ್ಟುಗಳು ಮತ್ತು ಮನೆಯ ಕಸವನ್ನು ರಸ್ತೆಗೆ ಎರೆಚದಂತೆ ಸ್ವಚ್ಛತಾ ವಾಹಿನಿಗೆ ನೀಡಬೇಕು. ಮತ್ತು ಕಸ ರಸ್ತೆಗೆ ಚೆಲ್ಲುವುದರಿಂದ ಸುತ್ತಮುತ್ತಲಿನ ಪ್ರದೇಶವು ದುರ್ವಾಸನೆ ಹೆಚ್ಚಾಗಿ ರೋಗ ರುಜಿನಗಳು ಹರಡಲು ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಸ್ವಚ್ಛತಾ ಕಾಪಾಡುವುದು ಪ್ರತಿಯೊಬ್ಬರ ಆದ ಕರ್ತವ್ಯವಾಗಿರುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ವಿಶೇಷ ಅಧಿಕಾರಿಗಳಾದ ಗಣಪತಿ ಸಾಕ್ರೆ, ಯೋಜನಾ ವ್ಯವಸ್ಥಾಪಕರಾದ ಮೆಹಬೂಬು, ಕಾರ್ಯದರ್ಶಿಗಳು, SLWM ಸಂಯೋಜಕರು ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗದವರು ಇದ್ದರು.