ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಆರೋಪದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಬಿಗ್ ರಿಲೀಫ್ ದೊರೆತಿದೆ. ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಮಂಗಳವಾರ ಇಂದು ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಕರ್ನಾಟಕ ಹೈಕೋರ್ಟ್ ಕಲಬುರಗಿ ವಿಭಾಗೀಯ ಪೀಠವು ಎಫ್ ಐಆರ್‌ಗೆ ತಡೆಯಾಜ್ಞೆ ನೀಡಿದೆ.
‘ಅಯೋಗ್ಯ’ ಎನ್ನುವ ಹೇಳಿಕೆ ಯಾವ ಜಾತಿಗೂ ಅನ್ವಯವಾಗುದಿಲ್ಲ. ಅಷ್ಟೇ ಅಲ್ಲದೆ, ಯಾರ ಜಾತಿ ನಿಂದನೆ ಆಗಿದೆಯೋ ಅವರು ದೂರು ನೀಡಿಲ್ಲ. ರಾಜಕೀಯ ಪಕ್ಷದ ಜಿಲ್ಲಾಧ್ಯಕ್ಷರು ದೂರು ನೀಡಿದ್ದಾರೆ. ನೀವು ಯಾವ ಉದ್ದೇಶ ಇಟ್ಟುಕೊಂಡು ದೂರು ನೀಡಿದ್ದಿರಿ ಅನ್ನೋದು ಗೋತ್ತಾಗುತ್ತದೆ ಎಂದು ನ್ಯಾಯಪೀಠ ದೂರುದಾರರನ್ನೇ ತರಾಟೆಗೆ ತೆಗೆದುಕೊಂಡಿದೆ.
ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ವಿಚಾರವಾಗಿ ರಾಯಚೂರಿನ ಫಸ್ಟ್ ಅಡಿಷನಲ್ ಅಟ್ರಾಸಿಟಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿಕೆ ಮಾಡಲಾಗಿದೆ. ನ್ಯಾಯಾಲಯಕ್ಕೆ ಹಾಜರಾಗುವಂತೆ ದೂರುದಾರರಿಗೆ ಕೋರ್ಟ್ ನೋಟಿಸ್ ನೀಡಿದೆ.
ಇತ್ತೀಚೆಗೆ ರಾಯಚೂರಿನ ಶಿರವಾದಲ್ಲಿ ನಮೋ ಬ್ರಿಗೇಡ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಚಕ್ರವರ್ತಿ ಸೂಲಿಬೆಲೆ, ಕಲಬುರಗಿಯ ಇಎಸ್‌ಐ ಆಸ್ಪತ್ರೆಯ ಬಗ್ಗೆ ಮಾತನಾಡಿದ್ದರು. ಇದೇ ವೇಳೆ, ಆಸ್ಪತ್ರೆಯನ್ನು ತಮ್ಮ ಹೆಸರಿನ ಪ್ರಚಾರಕ್ಕೆ ಖರ್ಗೆ ಅವರು ಬಳಸಿದ್ದಾರೆ. ಜನರ ತೆರಿಗೆ ಹಣದಲ್ಲಿ ಅವರು ತಮ್ಮ ಹೆಸರನ್ನು ಶಾಶ್ವತಗೊಳಿಸಲು ಮುಂದಾದ ಅಯೋಗ್ಯರಾಗಿದ್ದಾರೆ ಎಂದು ಹೇಳಿದ್ದರು.
ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತಿದ್ದಾರ್ ನೇತೃತ್ವದಲ್ಲಿ ಸೂಲಿಬೆಲೆ ವಿರುದ್ಧ ಕಮಿಷನರ್‌ಗೆ ದೂರು ನೀಡಲಾಗಿತ್ತು. ಸೂಲಿಬೆಲೆ ಅವರು ಖರ್ಗೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದರು.