ರಾಯಚೂರು: ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿರುವ ರಾಯಚೂರು ಪಾಲಿಕೆಗೆ ಒಂದೆಡೆ ಅಭಿವೃದ್ಧಿ ವಿಚಾರ ಸವಾಲಾಗಿದ್ದು, ಮತ್ತೊಂದೆಡೆ ರಸ್ತೆಗೆ ಸಚಿವರ ಹೆಸರಿಡುವ ವಿಚಾರ ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ.
ಈ ಹಿಂದೆ ಮೈಸೂರಿನಲ್ಲಿ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು ನಾಮಕರಣ ವಿವಾದದ ಬಳಿಕ ರಾಯಚೂರಿನಲ್ಲಿ ನಿರ್ಮಾಣವಾಗುತ್ತಿರುವ 80 ಅಡಿ ರಸ್ತೆಯೊಂದಕ್ಕೆ ಸಚಿವ ಎನ್.ಎಸ್.ಬೋಸರಾಜು ಹೆಸರು ನಾಮಕರಣ ಮಾಡಲು ಮಹಾನಗರ ಪಾಲಿಕೆಯ ಸಾಮಾನ್ಯ ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು. ಮತ್ತು ಪಾಲಿಕೆಯಿಂದ ರಸ್ತೆಗೆ ಸಚಿವ ಬೋಸರಾಜು ಹೆಸರು ನಾಮಕರಣ ಮಾಡುವ ಬಗ್ಗೆ ಆದೇಶವನ್ನೂ ಹೊರಡಿಸಿತ್ತು. ಇದೀಗ ಈ ವಿಚಾರ ವಿವಾದಕ್ಕೆ ಕಾರಣವಾಗಿದ್ದು, ಸಭೆಯಲ್ಲಿ ಒಪ್ಪಿಕೊಂಡ ಬಿಜೆಪಿ ಪಾಲಿಕೆಯ ಸದಸ್ಯರೇ ಇದೀಗ ರಸ್ತೆಗೆ ಸಚಿವರ ಹೆಸರನ್ನು ಇಡುವ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಸ್ತೆ ರಾಜಕೀಯ ಆರಂಭವಾಗಿದೆ. ಗಂಜ್ ವೃತ್ತ ಹಾಗೂ ಚಂದ್ರಮೌಳೇಶ್ವರ ವೃತ್ತದ ರಸ್ತೆಯಿಂದ ಗೋಶಾಲೆ ರಸ್ತೆಗೆ ಸಂಪರ್ಕ ಕಲ್ಪಿಸುವ 80 ಫೀಟ್ ರಸ್ತೆಗೆ ಸಣ್ಣನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೆಸರು ಇಟ್ಟಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ರಾಯಚೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೇಗೇರಿದ ನಂತರ ಪ್ರಥಮ ಸಾಮಾನ್ಯ ಸಭೆ ನಡೆದಿದ್ದು, ಅಜೆಂಡಾ ವಿಷಯಗಳ ಅನುಸಾರ ಚರ್ಚೆಯಾಗುತ್ತಿದ್ದ ವೇಳೆ ಅಜೆಂಡಾದಲ್ಲಿ ವಿಷಯ ಇಲ್ಲದಿದ್ದರೂ ನಗರದ 80 ಫೀಟ್ ರಸ್ತೆಗೆ ಎನ್.ಎಸ್.ಬೋಸರಾಜು ಹೆಸರು ನಾಮಕರಣ ಮಾಡುವುದನ್ನ ಬಿಜೆಪಿ ಸದಸ್ಯರು ಸೇರಿದಂತೆ ಎಲ್ಲ ಸದಸ್ಯರು ಸರ್ವಾನುಮತದಿಂದ ಒಪ್ಪಿದ್ದರು.
ಅಧ್ಯಕ್ಷರ ಅಪ್ಪಣೆ ಮೇರೆಗೆ ವಿಷಯದ ಚರ್ಚೆ ನಡೆದಿತ್ತು. ಕಾಂಗ್ರೆಸ್ ಸದಸ್ಯರ ಜೊತೆ ಬಿಜೆಪಿ ಸದಸ್ಯರು ಸಹ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ಬಳಿಕ ಬಿಜೆಪಿ ಸದಸ್ಯರು ಎನ್.ಎಸ್.ಬೋಸರಾಜು ಹೆಸರಿಡುವುದನ್ನ ಸ್ವಾಗತಿಸಿದ್ದಾರೆ.
ಆದರೆ ಸಭೆಯ ಮಾರನೇ ದಿನ ಬಿಜೆಪಿ ಸದಸ್ಯರು ಏಕಾಏಕಿ ಉಲ್ಟಾ ಹೊಡೆದಿದ್ದು, ಬಿಜೆಪಿ ಸದಸ್ಯರು ಬೋಸರಾಜು ಹೆಸರಿಡಬಾರದು, ಸಭೆಯ ನಿರ್ಣಯವನ್ನ ರದ್ದುಗೊಳಿಸಬೇಕು ಅಂತ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ರಾಯಚೂರು ನಗರ ಕ್ಷೇತ್ರದ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ಬೋಸರಾಜು ಹೆಸರು ಇಟ್ಟಿರುವುದು ದುರದೃಷ್ಟಕರ ಕೂಡಲೇ ಜಿಲ್ಲಾಧಿಕಾರಿಗಳು ಸಭೆಯ ನಿರ್ಣಯ ರದ್ದು ಮಾಡಿ ರಸ್ತೆಗೆ ಗೌತಮ್ ಬುದ್ಧನ ಹೆಸರಿಡಬೇಕು ಅಂತ ಶಾಸಕ ಶಿವರಾಜ್ ಪಾಟೀಲ್ ಆಗ್ರಹಿಸಿದ್ದಾರೆ.
ಇನ್ನೂ ಕಾಂಗ್ರೆಸ್ ಸದಸ್ಯರು ನಾವೇನು ಕದ್ದು ಮುಚ್ಚಿ ನಿರ್ಣಯ ಮಾಡಿಲ್ಲ. 80 ಫೀಟ್ ರಸ್ತೆಗೆ ಎನ್.ಎಸ್.ಬೋಸರಾಜು ಹೆಸರು ನಾಮಕರಣ ಕುರಿತು ಮನವಿ ಕೊಡುವ ಬಗ್ಗೆ ಬಿಜೆಪಿಯ ಕೆಲ ಸದಸ್ಯರಿಗೆ ಮೊದಲೇ ತಿಳಿಸಿದ್ದೆವು. ಬಿಜೆಯ ಕೆಲ ಸದಸ್ಯರು ನಮ್ಮ ಜೊತೆ ಬಂದು ಅಧ್ಯಕ್ಷರಿಗೆ ಮನವಿ ಕೊಟ್ಟಿದ್ದಾರೆ, ಇನ್ನೂ ಕೆಲವರು ನಿರ್ಣಯ ಸ್ವಾಗತಿಸಿದ್ದಾರೆ. ಸರ್ವಾನುಮತದಿಂದ ಸಭೆಯಲ್ಲಿ ನಿರ್ಣಯವಾಗಿದೆ. ಈಗ ಸಭೆ ಮುಗಿದ ಮೇಲೆ ಬಿಜೆಪಿ ಹೊರಗೆ ರಾಜಕೀಯ ಮಾಡುತ್ತಿದೆ ಅಂತ ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಚಾರ ಜಿಲ್ಲಾಧಿಕಾರಿಗಳು ಮುಂದಿದ್ದು, ಡಿಸಿ ಕೆ.ನಿತೀಶ ಯಾವ ನಿರ್ಣಯ ತೆಗೆದುಕೊಳ್ಳುತ್ತಾರೋ ಎಂದು ಕಾದು ನೋಡಬೇಕಿದೆ.