Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

National NewsState News

ಅದಾನಿಯನ್ನು ಬಂಧಿಸದಂತೆ ತಡೆಯುತ್ತಿರುವವರು ಯಾರು? ಸಿಎಂ ಪ್ರಶ್ನೆ

ಅದಾನಿಯನ್ನು ಬಂಧಿಸದಂತೆ ತಡೆಯುತ್ತಿರುವವರು ಯಾರು? ಸಿಎಂ ಪ್ರಶ್ನೆ

ಬೆಂಗಳೂರು ನ 22: ಅರೆಸ್ಟ್ ವಾರೆಂಟ್ ಬಂದಿದ್ದರೂ ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಅದಾನಿಯನ್ನು ಬಂಧಿಸಿ ತಪ್ಪಿಸಿಕೊಳ್ಳಲು ಬಿಡಬೇಡಿ ಎಂದು ಆಗ್ರಹಿಸಿದರು.

ಮೈಸೂರು ವಿಮಾನ‌ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.

ಅದಾನಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಪದೇ ಪದೇ ಹರಾಜಾಗುತ್ತಿದೆಯಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅದಾನಿಗೆ ರಕ್ಷಣೆ ಕೊಡುತ್ತಿರುವವರು ಯಾರು ಎನ್ನುವುದು ದೇಶಕ್ಕೇ ಗೊತ್ತಿದೆ. ನಿಮಗೆ ಗೊತ್ತಿಲ್ವಾ? ಈ ಸತ್ಯವನ್ನು ಮಾಧ್ಯಮಗಳು ದೇಶದ ಜನರಿಗೆ ಏಕೆ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು.

*ರಾಜ್ಯದ ರೈತರಿಗೆ ಕೇಂದ್ರ ಮಾಡಿದ ಅನ್ಯಾಯ ಸರಿಯಾ?*

ರೈತರಿಗೆ ರಿಯಾಯ್ತಿ ಬಡ್ಡಿ ದರದಲ್ಲಿ ಕೊಡುವ ಸಾಲದ ಮೊತ್ತವನ್ನು ನಬಾರ್ಡ್ ಈ ಬಾರಿ ಶೇ 58 ರಷ್ಟು ರಾಜ್ಯಕ್ಕೆ ಕಡಿತಗೊಳಿಸಿದೆ. ಇದು ರಾಜ್ಯದ ರೈತರಿಗೆ ಮಾಡಿದ ಪರಮ ಅನ್ಯಾಯ ಎಂದರು.

ಆದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ಅನ್ಯಾಯ ಸರಿ ಎಂದು ಹೇಳಿದ್ದಾರಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಜ್ಯದ ರೈತರಿಗೆ ಕೇಂದ್ರ ಅನ್ಯಾಯ ನಾಡಿದ್ದು ಸರಿ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದರೆ ಮಣ್ಣಿನ ಮಗ, ರೈತರ ಮಗ ಅಂದುಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿಯವರು ಉಸಿರೇ ಬಿಡ್ತಿಲ್ಲವಲ್ಲ ಏಕೆ ಎಂದು ಪ್ರಶ್ನಿಸಿದರು.

ವರ್ಷದಿಂದ ವರ್ಷಕ್ಕೆ ನಬಾರ್ಡ್ ನಿಂದ ರಾಜ್ಯದ ರೈತರಿಗೆ ಕೊಡುವ ಸಾಲದ ಪ್ರಮಾಣ ಹೆಚ್ಚಾಗಬೇಕು. ಆದರೆ ಈ ಬಾರಿ ಕಡಿತಗೊಳಿಸಿದೆ.

ರೈತರಿಗೆ ಶೇ4.5 ಬಡ್ಡಿದರದಲ್ಲಿ ನಬಾರ್ಡ್ ರಾಜ್ಯದ ರೈತರಿಗೆ ಸಾಲ ಕೊಡುತ್ತದೆ. ಈ ಬಡ್ಡಿಯನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಆದರೆ ಈಗ ನಬಾರ್ಡ್ ಸಾಲದ ಪ್ರಮಾಣ ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕ್ ಗಳ ಬಳಿ ಸಾಲಕ್ಕೆ ಹೋಗಿ ಶೇ10 ರಷ್ಟು ಬಡ್ಡಿ ಕಟ್ಟಬೇಕು. ಇದು ರಾಜ್ಯಕ್ಕೆ ಆಗುವ ನಷ್ಟ. ಇಷ್ಟು ದೊಡ್ಡ ಪ್ರಮಾಣದ ಅನ್ಯಾಯವನ್ನು ಜೋಶಿ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಿಂದಲೇ ಆಯ್ಕೆ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಅನ್ಯಾಯ ಸರಿ ಪಡಿಸಿ ಎಂದು ಮನವಿ ಕೊಟ್ಟಿದ್ದೇನೆ. ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಅನ್ಯಾಯ ಸರಿಪಡಿಸಲಿ ಎಂದು ಸವಾಲು ಹಾಕಿದರು.‌

*ಆಹಾರ ಭದ್ರತಾ ಕಾಯ್ದೆ ನಮ್ಮದು:

ಕೇಂದ್ರ ಸರ್ಕಾರವೇ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿದೆ. ಈಗ ಅವರೇ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರಲ್ಲಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಆಕ್ರೋಶಗೊಂಡ ಸಿಎಂ, ಆಹಾರ ಭದ್ರತಾ ಕಾಯ್ದೆಯನ್ನು ಜಾರಿ ಮಾಡಿದ್ದು ಪ್ರಧಾನಿ ಮನಮೋಹನ್ ಸಿಂಗ್ ಅವರು. ಇದನ್ನು ಬಿಜೆಪಿ ವಿರೋಧಿಸಿತ್ತು. ಹಿಂದಿನ‌ ಕೇಂದ್ರ ಸಚಿವರಾಗಿದ್ದ ಮುರಳಿ ಮನೋಹರ ಜೋಶಿಯವರು ಆಹಾರ ಭದ್ರತೆ ಕಾಯ್ದೆಯನ್ನು ವಿರೋಧಿಸಿದ್ದರು. ಈಗ ಅನ್ಯಾಯ ಅನ್ಯಾಯ ಅಂತ ಸುಳ್ ಸುಳ್ಳೇ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲಿಗೆ ರಾಜ್ಯದ ಜನರಿಗೆ ಏಳು ಕೆಜಿ ಅಕ್ಕಿ ಕೊಟ್ಟವರು ನಾವು. ಇದನ್ನು ಐದು ಕೆಜಿಗೆ ಇಳಿಸಿದ್ದು ಯಡಿಯೂರಪ್ಪ. ಈಗ ಯಡಿಯೂರಪ್ಪ ಅವರ ಮಗ ವಿಜಯೇಂದ್ರನಿಗೆ ಈ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅಕ್ಕಿ ಪ್ರಮಾಣವನ್ನು ಐದು ಕೆಜಿಗೆ ಇಳಿಸಿದ್ದನ್ನು ಹತ್ತು ಕೆಜಿಗೆ ಏರಿಸಿದ್ದು ನಾವು. ಈ ಸತ್ಯ ರಾಜ್ಯದ ಜನರಿಗೆ ಗೊತ್ತಿದೆ ಎಂದರು.

*ಸರ್ಕಾರಿ ನೌಕರರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ?

ಸರ್ಕಾರಿ ನೌಕರರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ? ಆದಾಯ ತೆರಿಗೆ ಪಾವತಿಸುವವರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ? ಏನ್ ಆರ್.ಅಶೋಕಾ ಫೋಟೋ ತೆಗೆಸಿಕೊಂಡಿದ್ದೇ ಕೊಂಡಿದ್ದು ಎಂದು ಲೇವಡಿ ಮಾಡಿದರು.

ಸರ್ಕಾರಿ ನೌಕರರಿಗೆ, ಆದಾಯ ತೆರಿಗೆ ಪಾವತಿಸುವವರಿಗೆ ಬಿಪಿಎಲ್ ಕಾರ್ಡ್ ಕೊಡಬಾರದು ಅಂತ ನಿಯಮಾವಳಿ, ಗೈಡ್ ಲೈನ್ ರಚಿಸಿದ್ದೇ ಬಿಜೆಪಿ‌. ಈಗ ಇವರೇ ಪ್ರತಿಭನೆ ಅಂತ ಫೋಟೋ ತೆಗೆಸಿಕೊಳ್ತಾ ಇದಾರೆ ಎಂದು ಲೇವಡಿ ಮಾಡಿದರು.

Megha News