ಬೆಂಗಳೂರು: ಕಾಂಗ್ರೆಸಿಗರು ಸಂವಿಧಾನವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಿದ್ದಾರೆ ಎಂದಿರುವ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ “ಒಂದು ವೇಳೆ ಸಂವಿಧಾನ ಬದಲಾವಣೆ ಮಾಡುವ ಕೆಲಸಕ್ಕೆ ಹೊರಟರೆ ದೇಶದಲ್ಲಿ ರಕ್ತಪಾತವಾಗಲಿದೆ” ಎಂದು ಹೇಳಿದರು.
ಉತ್ತರ ಕನ್ನಡದ ಸಭೆಯೊಂದರಲ್ಲಿ ಮಾತನಾಡಿದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ, ಕಾಂಗ್ರೆಸಿಗರು ಆಡಳಿತದಲ್ಲಿದ್ದಾಗ ಸಂವಿಧಾನವನ್ನು ಸಂಪೂರ್ಣವಾಗಿ ತಿರುಚಿದ್ದಾರೆ. ಬೇಡದೆ ಇರುವ ವಿಚಾರಗಳನ್ನೆಲ್ಲ ಅದರಲ್ಲಿ ಸೇರಿಸಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಸಂವಿಧಾನ ಬದಲಾವಣೆ ಮಾಡಲು ಹೊರಟರೆ ದೇಶದಲ್ಲಿ ರಕ್ತಪಾತವಾಗಲಿದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹೆಗಡೆ ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಚಿವರಾಗಿದ್ದಾಗಲೂ ಸಂವಿಧಾನ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದರು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದಾಗಲೇ ಹೆಗಡೆ ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದರು. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಸಂವಿಧಾನ ಬದಲಾವಣೆ ಮಾಡುವುದು ಬಿಜೆಪಿಯವರ ರಹಸ್ಯ ಅಜೆಂಡಾ. ಮನವಾದಿವನ್ನು ಸಮರ್ಥನೆ ಮಾಡಿಕೊಳ್ಳೋದು, ಮನುಸ್ಮೃತಿಗೆ ಅನುಗುಣವಾಗಿ ಸಂವಿಧಾನ ಇರಬೇಕು ಅನ್ನೋದು ಅವರ ಹಿಡನ್ ಅಜೆಂಡಾ. ಅದಕ್ಕೆ ಇಡೀ ದೇಶದ ಬಡವರು, ದಲಿತರು, ಅಲ್ಪಸಂಖ್ಯಾತರು ಹಿಂದುಳಿಬದವರು ಎಲ್ಲರೂ ಅವರನ್ನು ವಿರೋಧ ಮಾಡುತ್ತಾರೆ. ಒಂದು ವೇಳೆ ಸಂವಿಧಾನ ಬದಲಾವಣೆಯ ಕೆಲಸ ಆದರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ