ಕಲಬುರಗಿ: ಮಳೆಯಿಂದಾಗಿ ಮನೆ, ಬೆಳೆ ಹಾನಿಗೀಡಾದ ಪ್ರಕರಣಗಳಲ್ಲಿ ತುರ್ತು ಪರಿಹಾರ ನೀಡಲು ಒಟ್ಟಾರೆ ₹ 190 ಕೋಟಿ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಜಮಾ ಮಾಡಲಾಗಿದೆ. ₹ 141 ಕೋಟಿಯನ್ನು ಬರೀ ಪರಿಹಾರ ನೀಡಲೆಂದೇ ಮೀಸಲಿಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕಲಬುರಗಿ ವಿಭಾಗ ಮಟ್ಟದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ‘₹ 141 ಕೋಟಿ ಜೊತೆಗೆ ₹ 39 ಕೋಟಿ ಪ್ರಕೃತಿ ವಿಕೋಪ ಪರಿಹಾರಕ್ಕೆ ಹಾಗೂ ₹ 13 ಕೋಟಿ ಅತ್ಯವಶ್ಯಕ ಖರ್ಚುಗಳನ್ನು ನಿಭಾಯಿಸಲು ತೆಗೆದಿರಿಸಲಾಗಿದೆ. ಮನೆಗಳು, ಬೆಳೆಗಳು ಹಾಳಾದ ಬಗ್ಗೆ ಸರ್ವೆ ನಡೆಸಿದ ತಕ್ಷಣ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.
‘ಮಳೆ ಹಾನಿಯ ಬಗ್ಗೆ ಪ್ರಾಥಮಿಕ ಹಂತದ ಸರ್ವೆ ಮಾತ್ರ ಇದೆ. ಹೀಗಾಗಿ, ಅದರ ಆಧಾರದ ಮೇಲೆ ಪರಿಹಾರ ನೀಡುವ ಬದಲು ಹೊಸದಾಗಿ ಸರ್ವೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಮಳೆ ಬಂದು ಇನ್ನೂ ನೆಲ ಆರಿಲ್ಲ. ಹೀಗಾಗಿ, ಸರ್ವೆಗೆ ಹೆಚ್ಚು ಸಮಯ ನೀಡುವಂತೆ ಅಧಿಕಾರಿಗಳು ಕೋರಿಕೆ ಸಲ್ಲಿಸಿದ್ದರಿಂದ ಆಗಸ್ಟ್ 3ರಿಂದ ಸರ್ವೆ ಕಾರ್ಯ ಶುರುವಾಗಲಿದ್ದು, ಆ 7ಕ್ಕೆ ಮುಗಿಸುವಂತೆ ತಿಳಿಸಿದ್ದೇನೆ’ ಎಂದು ಹೇಳಿದರು.
ಯಾವುದೇ ನಗರದ ಮಾಸ್ಟರ್ ಪ್ಲಾನ್ ವ್ಯಾಪ್ತಿಯ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳು ಅನುಮತಿ ನೀಡಲು ಐದಾರು ತಿಂಗಳು ತೆಗೆದುಕೊಳ್ಳುತ್ತಿದ್ದರು. ಕರ್ನಾಟಕ ಭೂ ಕಂದಾಯ (ತಿದ್ದುಪಡಿ)ಕಾಯ್ದೆಯನ್ನು ಜಾರಿಗೊಳಿಸಲಾಗಿದ್ದು, ಈ ಕಾಯ್ದೆಯಿಂದಾಗಿ ಅರ್ಜಿದಾರ ಸ್ವಯಂ ಘೋಷಣೆಯ ಮೂಲಕವೇ ಕೃಷಿಯೇತರ ಉದ್ದೇಶಕ್ಕೆ ಕೃಷಿ ಭೂಮಿಯನ್ನು ಪರಿವರ್ತಿಸಲು ಅವಕಾಶ ನೀಡಲಾಗಿದೆ. ಹೀಗಾಗಿ, ಅನುಮತಿಗೆ ಕಾಯುವ ಬದಲು ನೇರವಾಗಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಯೋಜನೆಗೆ ಅನುಮೋದನೆಗಾಗಿ ಅರ್ಜಿ ಸಲ್ಲಿಸಬಹುದು ಎಂದರು.
ಮೊದಲಿದ್ದ 175 ತಾಲ್ಲೂಕುಗಳ ಜೊತೆಗೆ ಹೊಸದಾಗಿ 63 ತಾಲ್ಲೂಕುಗಳನ್ನು ರಚಿಸಲಾಗಿದೆ. ಕೆಲ ತಾಲ್ಲೂಕುಗಳನ್ನು ಅನಗತ್ಯವಾಗಿ ರಚಿಸಲಾಗಿದೆ. ಹಂತ ಹಂತವಾಗಿ ಅವುಗಳಿಗೆ ಕಚೇರಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯಲಿದೆ. ಕೊಂಚ ವಿಳಂಬವಾದರೂ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಕೃಷ್ಣ ಬೈರೇಗೌಡ ಭರವಸೆ ನೀಡಿದರು.