ರಾಯಚೂರು: ಪ್ರೀತಿಸಿ ಮದುವೆಯಾಗಿರುವ ದ್ವೇಷ ಹಿನ್ನಲೆಯಲ್ಲಿ ಐದು ಜನರನ್ನು ಕೊಲೆ ಮಾಡಿದ ಮೂರು ಜನ ಅರೋಪಿಗಳಿಗೆ ಗಲ್ಲು, ಇಬ್ಬರ ಮೇಲೆ ಕೊಲೆಗೆ ಪ್ರಯತ್ನಿಸಿದ ಸಿಂಧನೂರು ನಗರದ ಸುಕಾಲಪೇಟೆ ಇನ್ನೂಳಿದ 9ಜನ ಆರೋಪಿತರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಸಿಂಧನೂರಿನ 3 ನೇ ಹೆಚ್ಜುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಬಿ.ಜಕಾತಿ ತೀರ್ಪು ನೀಡಿದ್ದಾರೆ
ಸಿಂಧನೂರು ನಗರದ ಸುಕಾಲಪೇಟೆ ಹಿರೇಲಿಂಗೇಶ್ವರ ಕಾಲೋನಿ ಮೃತ ಈರಪ್ಪ ಮಗನಾದ ಮೌನೇಶ ಹಾಗೂ ಕೊಲೆ ಪ್ರಕರಣದ ಮೊದಲನೇ ಆರೋಪಿ ಸಣ್ಣ ಫಕೀರಪ್ಪನ ಮಗಳು ಮಂಜುಳಾ ಅವರನ್ನು ಪ್ರೀತಿಸಿ ಮದುವೆಯಾದ ದ್ವೇಷದಿಂದ ಕೊಲೆ ಹಾಗೂ ಕೊಲೆಗೆ ಯತ್ನಿಸಿದ ಘಟನೆ 2020, ಜುಲೈ 7 ರಂದು ನಡೆದಿತ್ತು. ಪ್ರಕರಣದ ಕುರಿತು ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಪಿಐ ಬಾಲಚಂದ್ರ ಡಿ.ಲಕ್ಕಂ ತನಿಖೆ ಕೈಗೊಂಡು ದೋಷರೋಪಣ ಪತ್ರ ಸಲ್ಲಿಸಿದ್ದರು. ಸಣ್ಣಫಕೀರಪ್ಪ ಸೋಮಪ್ಪ, ಅಂಬಣ್ಣ ಸೋಮಪ್ಪ, ಸೋಮಶೇಖರ ಹಿರೇಫಕೀರಪ್ಪ, ಸಿದ್ದಮ್ಮ ಸಣ್ಣ ಫಕೀರಪ್ಪ, ಗಂಗಮ್ಮ ಅಂಬಣ್ಣ ಹೆಬ್ಬಾಳ, ದೊಡ್ಡ ಪಕೀರಪ್ಪ ಸೋಮಪ್ಪ, ಹನುಮಂತ ಸೋಮಪ್ಪ, ಹೊನ್ನೂರಪ್ಪ ಸೋಮಪ್ಪ, ಬಸಲಿಂಗಪ್ಪ ದೊಡ್ಡ ಫಕೀರಪ್ಪ, ಅಮರೇಶ ಮಲ್ಲಪ್ಪ, ಶಿವರಾಜ ಅಂಬಣ್ಣ ಹೆಬ್ಬಾಳ, ಪರಸಪ್ಪ ಜಂಬುಲಿಂಗಪ್ಪ ಸಿದ್ದಾಪುರ ಇವರು ಅಕ್ರಮಕೂಟ ಕಟ್ಟಿಕೊಂಡು ಒಳಸಂಚು ರೂಪಿಸಿ ಈರಪ್ಪ, ಸುಮಿತ್ರಮ್ಮ, ಮಕ್ಕಳಾದ ನಾಗರಾಜ, ಹನುಮೇಶ ಹಾಗೂ ಮಗಳು ಶ್ರೀದೇವಿ ಇವರನ್ನು ಕೊಲೆ ಮಾಡಿ, ಮೃತ ಈರಪ್ಪನ ಸೊಸೆಯಾದ ರೇವತಿ, ಮಗಳು ತಾಯಮ್ಮ ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದರು ಎಂದು ವಿವರಿಸಲಾಗಿದೆ.
ಈ ಬಗ್ಗೆ 2025, ಏಪ್ರೀಲ್ 8ರಂದು
ಪ್ರಕರಣದ ವಾದ-ವಿವಾದಗಳನ್ನು ಆಲಿಸಿದ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಬಿ.ಜಕಾತಿ ತೀರ್ಪು ನೀಡಿದ್ದು, ಕೊಲೆ ಆರೋಪಿತರಾದ ಸಣ್ಣ ಪಕೀರಪ್ಪ, ಅಂಬಣ್ಣ ಸೋಮಪ್ಪ, ಸೋಮಶೇಖರ್ ಹಿರೇಫಕೀರಪ್ಪರಿಗೆ ಮರಣದಂಡನೆ (ಗಲ್ಲುಶಿಕ್ಷೆ) ಹಾಗೂ ತಲಾ 47,000 ದಂಡ, ಹಾಗೂ ಉಳಿದ 9ಜನ ಆರೋಪಿತರಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ತಲಾ 97,500 ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆರ್.ಎ.ಗಡಕರಿ ವಾದ ಮಂಡಿಸಿದ್ದರು.
ಐದು ವರ್ಷಗಳ ಹಿಂದೆ ನಡೆದಿದ್ದ ಐವರ ಕೊಲೆ ಪ್ರಕರಣ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತ್ತು. ಅರೋಪಿಗಳಿಗೆ ಶಿಕ್ಷೆಯಾಗಲು ಸಹಕರಿಸಿದ ಪೊಲೀಸ್ ಸಿಬ್ವಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.