ರಾಯಚೂರು: ಸಭೆಗೆ ಅಪೂರ್ಣ ಮಾಹಿತಿಯೊಂದಿಗೆ ಹಾಜರಾದ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದ ಕಾರಣ ಕಾರ್ಮಿಕ ಸಚಿವ ಸಂತೋಷ ಎಸ್.ಲಾಡ್ ಅವರು ಅಧಿಕಾರಿಗಳಿಗೆ ನಿಮ್ಮಂತ ಅಧಿಕಾರಿಗಳನ್ನು ಇಟ್ಟುಕೊಂಡು ಹೇಗೆ ಸರ್ಕಾರ ನಡೆಸುವುದು ಎಂದು ಬೇಸರ ವ್ಯಕ್ತಪಡಿಸಿದರು.
ಅವರು ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ಕಂದಾಯ ವಿಭಾಗದ ಜಿಲ್ಲೆಗಳ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿ,
ಅಧಿಕಾರಿಗಳು ಸಭೆಗೆ ಸರಿಯಾದ ಮಾಹಿತಿ ತರುವುದಿಲ್ಲ. ಸಭೆಯ ಬಗ್ಗೆ ಗಂಭೀರತೆಯಿಲ್ಲ. ಜಿಲ್ಲೆಯಲ್ಲಿರುವ ಕಾರ್ಮಿಕ ಕಾರ್ಡುಗಳ ಬಗ್ಗೆಯೇ ನಿಮ್ಮಲ್ಲಿ ಮಾಹಿತಿ ಇಲ್ಲ. ಸಭೆಗೇನು ಚಿಪ್ಸ್ ತಿನ್ನಲು ಬರುತ್ತೀರಾ. ನಿಮ್ಮಂತ ಸಾಮಾನ್ಯ ಜ್ಞಾನವಿಲ್ಲದ ಅಧಿಕಾರಿಗಳಿಂದ ಸರ್ಕಾರ ನಡೆಸುವುದೇಗೆ. ಕೆಲಸ ಮಾಡುವುದು ಹೇಗೆ ಎಂದು ಕಳವಳಗೊಂಡರು.
ಈ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ಧ್ದಲ್, ಜಿ.ಹಂಪಯ್ಯನಾಯಕ, ಜಿ.ಕರೆಮ್ಮ ನಾಯಕ, ಜಿಲ್ಲಾಧಿಕಾರಿ ಕೆ.ನಿತೀಶ, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಎಸ್ಪಿ ಎಂ.ಪುಟ್ಟಮಾದಯ್ಯ, ಕಾರ್ಮಿಕ ಆಯುಕ್ತ ಗೋಪಾಲಕೃಷ್ಣ, ಇಲಾಖೆಯ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಿ.ಭಾರತಿ ಸೇರಿದಂತೆ ಇತರರಿದ್ದರು.