ಧಾರವಾಡ. ಹಿಂದುತ್ವದಿಂದ ಹೊರ ಬಾರದೇ ಇದ್ದರೆ ಲಿಂಗಾಯತರಿಗೆ ಉಳಿಗಾಲವಿಲ್ಲ ಎಂದು ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ, ಬಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಚನ್ನಬಸವೇಶ್ವರ ನಗರದ ಲಿಂಗಾಯತ ಭವನದ ಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಲಿಂಗಧಾರಣೆ ಸಮಾರಂಭ ಹಾಗೂ ಸಹಜ ಶಿವಯೋಗ ಕಾರ್ಯಕ್ರಮದ ಸಾನಿಧ್ಯವಹಿಸಿ, ಅವರು ಮಾತನಾಡಿದರು,
ಹಿಂದೂ ಶಬ್ಧ ಬಳಸುವ ಲಿಂಗಾಯತರಿಗೆ ಭವಿಷ್ಯ ವಿಲ್ಲ. ಮೊದಲು ಈ ಬಗ್ಗೆ ಲಿಂಗಾಯತರಲ್ಲಿರುವ ಗೊಂದಲ ನಿವಾರಿಸಬೇಕಿದೆ. ಇದಾದ ಬಳಿಕ ಪ್ರತ್ಯೇಕ ಧರ್ಮ ಬೇಕಾದರೆ, ಲಿಂಗಾಯತರು ಹಿಂದೂ ಪದ ಕೈ ಬಿಡಲೇಬೇಕಿದೆ ಎಂದರು. ಜೈನರು, ಸಿಖ್ ಸಮುದಾಯಕ್ಕೆ ಈಗಾಗಲೇ ಸ್ವತಂತ್ರ್ಯ ಧರ್ಮ ಮಾನ್ಯತೆ ಲಭಿಸಿದೆ. ಲಿಂಗಾಯತ ಧರ್ಮಕ್ಕೂ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವ ವಿಶ್ವಾಸವಿದ್ದು, ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವ ಎಲ್ಲ ಅರ್ಹತೆಗಳಿವೆ. ಹೀಗಾಗಿ ಹಿಂದೂತ್ವಕ್ಕೆ ಅಂಟಿಕೊಳ್ಳದೇ ಲಿಂಗಾಯತರು ಎಚ್ಚೆತ್ತು, ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಈ ಬಗ್ಗೆ ಚಿಂತನೆ ಮಾಡಬೇಕಿದೆ ಎಂದರು.
ಲಿಂಗಾಯತರ ಈಗಿನ ಸ್ಥಿತಿ ಅತಂತ್ರವೇ ಆಗಿದ್ದು, ಮುಂದಿನ 40 ವರ್ಷಗಳಲ್ಲಿ ಲಿಂಗಾಯತರ ಸ್ಥಿತಿಯು ವಿಷಮ ಸ್ಥಿತಿಗೆ ತಲುಪಲಿದೆ. ಹೀಗಾಗಿ ಈಗಲೇ ಲಿಂಗಾಯತರು ಎಚ್ಚೆತ್ತು ಜಾತಿಗೆ ಅಂಟಿಕೊಳ್ಳದೇ ಸ್ವತಂತ್ರ್ಯ ಧರ್ಮದ ಅಸ್ತಿತ್ವಕ್ಕೆ ಕೈ ಜೋಡಿಸಬೇಕು. ಇದೊಂದು ಬಹಳ ಸೂಕ್ಷ್ಮ ವಿಚಾರವಾಗಿದ್ದು, ಹೀಗಾಗಿ ಲಿಂಗಾಯತ ಧರ್ಮದ ಬಗ್ಗೆ ಮೂಲ ಆಶಯಗಳ ಬಗ್ಗೆ ಅರಿವು ಪಡೆದುಕೊಳ್ಳುವ ಅಗತ್ಯವಿದೆ. ಹೀಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು ನೇತೃತ್ವವಹಿಸಿಕೊಂಡು ಈ ಬಗ್ಗೆ ಮಠಾಧಿಶರ ಚಿಂತನ-ಮಂಥನ ಕೈಗೊಳ್ಳಲು ವೇದಿಕೆ ರೂಪಿಸುವ ಅಗತ್ಯವಿದೆ ಎಂದರು.