ಬೆಂಗಳೂರು. ರಾಯಚೂರು ನಗರದ ಅಭಿವೃದ್ದಿಗಾಗಿ ರಾಯಚೂರು ವಿಷನ್ 2035 ಎಂಬ ದೂರದೃಷ್ಟಿಯೊಂದಿಗೆ ಸಮಗ್ರ ಕ್ರಿಯಾ ಯೋಜನೆ ಸಿದ್ದಪಡಿಸಿ ಜಾರಿ ಮಾಡಿ ಹೊಸ ನಗರ ನಿರ್ಮಾಣ ದಿಸೆಯಲ್ಲಿ ಅಗತ್ಯ ಯೋಜನಾ ವರದಿ ಸಿದ್ದಪಡಿಸಲು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಸಮಕ್ಷಮ ನಡೆದ ನಗರಾಭವೃದ್ದಿ ಇಲಾಖೆಯ ಸಭೆಯಲ್ಲಿ ನಿರ್ಧರಿಸಲಾಯಿತು.
ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ನಗರಾಭಿವೃದ್ದಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ರಾಯಚೂರು ನಗರ ಸಂಪೂರ್ಣ ಹಳೆಯದಾಗಿದ್ದು ಬರುವ ದಿನಗಳಲ್ಲಿ ಸುಂದರ ಮತ್ತು ಯೋಜನಾಬದ್ದ ನಗರವನ್ನಾಗಿ ವಿಸ್ತರಿಸಲು ಈಗಿರುವ ಮಾಸ್ಟರ್ ಪ್ಲಾನ್ ಪರಿಷ್ಕರಿಸಿ ನೂತನ ಮಾಸ್ಟರ್ ಪ್ಲಾನ್ ಸಿದ್ದಪಡಿಸುವ ಮೂಲಕ ನಗರವನ್ನು ಯೋಜನಬದ್ದವಾಗಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ಸಿದ್ದಪಡಿಸಲು ನಗರಾಭಿವೃದ್ದಿ ಅಧಿಕಾರಿಗಳಿಗೆ ಸಚಿವ ಎನ್ ಎಸ್ ಭೋಸರಾಜು ಸೂಚನೆ ನೀಡಿದರು.
ರಾಯಚೂರು ನಗರದ ಸಂಚಾರದ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಿಂಗ್ ರಸ್ತೆಯನ್ನು ಯೋಜಿಸಲಾಗಿದೆ. ಇದರ ವಿಸ್ತ್ರುತ ಯೋಜನಾ ವರದಿಯನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ರಾಯಚೂರಿನ ಐತಿಹಾಸಿಕ ಮಾವಿನಕೆರೆ ಅಭಿವೃದ್ದಿಗಾಗಿ ನಗರಾಭಿವೃದ್ದಿ ಪ್ರಾಧಿಕಾರದಿಂದ ಈಗಾಗಲೇ 10 ಕೋಟಿ, ಸಣ್ಣ ನೀರಾವರಿ ಇಲಾಖೆ ವತಿಯಿಂದ 5 ಕೋಟಿ ವೆಚ್ಚದಲ್ಲಿ ಮಾವಿನ ಕೆರೆ ಸಮಗ್ರ ಅಭಿವೃದ್ದಿ ಮಾಡುವುದರ ಜೊತೆಗೆ ಕೆರೆಗೆ ಬರುವ ಕೊಳಚೆ ನೀರನ್ನ ತಡಿಯಲು ಎಸ್‌ಟಿಪಿಗಾಗಿ ಬೇಕಾಗುವ 5 ಕೋಟಿ ಅನುದಾನವನ್ನ ನೀಡುವಂತೆ ಸಚಿವರ ಸೂಚನೆ ಮೇರೆಗೆ ನಗರಾಭಿವೃದ್ದಿ ಇಲಾಖೆ ವತಿಯಿಂದ ಒದಗಿಸುವ ನಿಟ್ಟಿನಲ್ಲಿ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್ ಒಪ್ಪಿಗೆ ನೀಡಿದರು.
ರಾಯಚೂರು ನಗರದಲ್ಲಿ ಕಳೆದ ನಾಲ್ಕಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನಿರಂತರ ಕುಡಿಯುವ ನೀರಿನ ಯೋಜನೆ (24*7) ಚಾಲನೆ ನೀಡುವ ನಿಟ್ಟಿನಲ್ಲಿ ಚರ್ಚಿಸಲಾಯಿತು. ಈಗಾಗಲೇ ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮದಿಂದ 75 ಕೋಟಿ ರೂಪಾಯಿ ಖರ್ಚಾಗಿದ್ದರು ಇನ್ನು ಬಾಕಿ ಕಾಮಗಾರಿ ಪೂರ್ಣಗೊಳಿಸಲು 20 ಕೋಟಿ ಅಗತ್ಯವಿದ್ದು ಸರಕಾರ ಇಲ್ಲವೇ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯ ವತಿಯಿಂದ ಬಾಕಿ ಹಣ ಭರಿಸಿ ಪೂರ್ಣಗೊಳಿಸಲು ಸಭೆಯಲ್ಲಿ ತೀರ್ಮಾನಿಸಿ ಈ ಬಗ್ಗೆ ಕ್ರಿಯಾ ಯೋಜನೆ ಸಿದ್ದಪಡಿಸಲು ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶರತ್ ಬಿ ಹಾಗೂ ಕರ್ನಾಟಕ ನಗರ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾದ ದೀಪಾ ಚೋಳನ್ ಅವರಿಗೆ ಸೂಚಿಸಲಾಯಿತು.
ರಾಯಚೂರು ನಗರದಲ್ಲಿ ಓಳಚರಂಡಿ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಹಿಂದೆ ನಗರದ ಹಳೇ ಬಡಾವಣೆಗಳನ್ನ ಹೊರತುಪಡಿಸಿ ಹೊಸ ಬಡಾವಣೆಗಳಿಗೆ ಮಾತ್ರ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಹಳೆ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಅದನ್ನು ಸಹ ಪೂರ್ಣಗೊಳಿಸಲು ಕ್ರಿಯಾಯೋಜನೆ ಸಿದ್ದಪಡಿಸಿ ಸಲ್ಲಿಸುವಂತೆ ನಗರಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರು ನಗರ ನೀರು ಸರಬರಾಜು ಮಂಡಳೀಯ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು.
ರಾಯಚೂರು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಸಿದ್ದರಾಮಪೂರ ಬಡಾವಣೆಯ ಮೊದಲನೇ ಹಂತದಲ್ಲಿ ಈಗಾಗಲೇ ನೂರಕ್ಕೂ ಹೆಚ್ಚು ಜನರಿಗೆ ನಿವೇಶನಗಳು ಹಂಚಿಕೆ ಮಾಡಲಾಗಿದೆ, ಆದರೆ ಮೂಲಭೂತ ಸೌಕರ್ಯಗಳೂ ಅಭಿವೃದ್ದಿ ಆಗದಿರುವುದರಿಂದ ಹಂಚಿಕೆದಾರರಿಗೆ ನಿವೇಶನಗಳು ಹಸ್ತಾಂತರಿಸಲ್ಲ. ಈಗಾಗಲೇ ಶೇಕಡಾ 100 ರಷ್ಟು ಹಣ ತುಂಬಿದ ಎಲ್ಲರಿಗೂ ನಿವೇಶನ ಹಂಚಿಕೆ ಮಾಡುವ ನಿಟ್ಟಿನಲ್ಲಿ, ಶೇಕಡಾ 25 ಮತ್ತು ಶೇಕಡಾ 50 ರಷ್ಟು ಹಣ ತುಂಬಿದವರಿಗೆ ಯಾವ ರೀತಿಯಲ್ಲಿ ನಿವೇಶನ ಹಂಚಿಕೆ ಮಾಡಬೇಕು ಹಾಗೂ ಬಡಾವಣೆಯ ಅಭಿವೃದ್ದಿಗೆ ಬೇಕಾಗುವ ಅನುನದಾನದ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಇಲಾಖೆಗೆ ಸಲ್ಲಿಸಿದಲ್ಲಿ ಅದಕ್ಕೆ ಒಪ್ಪಿಗೆ ಸೂಚಿಸುವುದಾಗಿ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗಳು ಹೇಳಿದರು.
ರಾಯಚೂರು ನಗರ ವಿಸ್ತಾರವಾಗಿ ಬೆಳೆದಿದೆ. ಹಳೆ ನಗರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ದೀಪ ಮತ್ತು ಕಂಬಗಳ ಕೊರತೆಯಿದೆ. ಈಗಾಗಲೇ 15 ಸಾವಿರ ವಿದ್ಯುತ್ ದೀಪಗಳನ್ನ ನೀಡಲು ಒಪ್ಪಲಾಗಿದೆ. ಇನ್ನೂ ಏಷ್ಟು ಪ್ರಮಾಣದಲ್ಲಿ ವಿದ್ಯುತ್ ದ್ವೀಪಗಳೂ ಬೇಕಾಗುತ್ತವೆ ಅದರ ಪ್ರಸ್ತಾವನೆ ಕಳುಹಿಸಿದ್ದಲ್ಲಿ ಅದನ್ನ ಮಂಜೂರು ಮಾಡುವುದಾಗಿ ನಗರಾಭಿವೃದ್ದ ಇಲಾಖೆ ಕಾರ್ಯದರ್ಶಿಗಳು ತಿಳಿಸಿದರು.
ಸಭೆಯಲ್ಲಿ ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯಕ್, ಕರ್ನಾಟಕ ನಗರ ಮೂಲಭೂತ ಸೌಲಭ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ದೀಪಾ ಚೋಳನ್, ಸೇರಿದಂತೆ ರಾಯಚೂರಿನ ನಗರಾಭಿವೃದ್ದಿ ಇಲಾಖೆಯ ಅಧಿಕಾರಿಗಳೂ ಉಪಸ್ಥಿತರಿದ್ದರು.
Megha News > State News > ರಾಯಚೂರು ನಗರದ ಸಮಗ್ರ ಅಭಿವೃದ್ದಿಗೆ ವಿಷನ್ 2035 ಸಮಗ್ರ ಕ್ರಿಯಾ ಯೋಜನೆ ತಯಾರಿಸಲು ನಿರ್ಧಾರ-ಸಚಿವ ಬೋಸರಾಜು
ರಾಯಚೂರು ನಗರದ ಸಮಗ್ರ ಅಭಿವೃದ್ದಿಗೆ ವಿಷನ್ 2035 ಸಮಗ್ರ ಕ್ರಿಯಾ ಯೋಜನೆ ತಯಾರಿಸಲು ನಿರ್ಧಾರ-ಸಚಿವ ಬೋಸರಾಜು
Tayappa - Raichur26/02/2024
posted on
Leave a reply