ಶಿವಮೊಗ್ಗ. ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ ಬಿಜೆಪಿ ನಾಯಕರ ವಿರುದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಬಿಜೆಪಿ ನಾಯಕಾರದ ಆರ್. ಅಶೋಕ್, ಬಿ.ವೈ. ವಿಜಯೇಂದ್ರ, ನಳಿನ್ ಕುಮಾರ್ ಕಟೀಲ್ ಮತ್ತು ರವಿಕುಮಾರ್ ಅವರು ನನ್ನ ರಾಜೀನಾಮೆ ಕೇಳಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ. ನನ್ನ ಖಾಸಗಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೇಳಲು ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ವಿಪಕ್ಷ ನಾಯಕ ಆರ್. ಅಶೋಕ್ ಸಾವಿನಲ್ಲೂ ದುಡ್ಡು ಮಾಡಿದವರು. ಅವರಿಗೆ ಮಾನ ಮರ್ಯಾದೆ, ನೈತಿಕತೆ ಇದ್ದರೆ ನನ್ನ ರಾಜೀನಾಮೆ ಕೇಳುವುದನ್ನು ಬಿಟ್ಟು ಅವರು ರಾಜೀನಾಮೆ ಕೊಡಬೇಕು. ಹಾಗೆಯೇ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದ ನಳಿನ್ ಕುಮಾರ್ ಕಟೀಲ್ ಬಿಜೆಪಿಯನ್ನು ಈ ಬಾರಿ ಎಲ್ಲಿಗೆ ತಂದಿಟ್ಟಿದ್ದಾರೆ ಎಂದು ಅವರೇ ಹೇಳಲಿ. ಅವರೂ ಕೊರೋನಾ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡಿದವರೇ. ಅವರು ಒಂದು ಸೋಲಿನ ಪಕ್ಷದ ಅಧ್ಯಕ್ಷರಾಗಿದ್ದರು. ಕರಾವಳಿ ಭಾಗದಲ್ಲಿ ಪ್ರವೀಣ್ ನೆಟ್ಟಾರು ಸೇರಿದಂತೆ ಯಾರ ಯಾರ ಸಾವಿಗೆ ಕಾರಣರಾಗಿದ್ದಾರೆ ಎಂದು ಒಮ್ಮೆ ಯೋಚನೆ ಮಾಡಲಿ ಎಂದು ಟಾಂಗ್ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಗುಡುಗಿದ ಸಚಿವ ಮಧು ಬಂಗಾರಪ್ಪ, ವಿಜಯೇಂದ್ರ ಯಾವ ಆಧಾರದಲ್ಲಿ ರಾಜ್ಯಾಧ್ಯಕ್ಷರಾಗಿದ್ದಾರೋ ಅದು ನನಗೆ ಗೊತ್ತಿಲ್ಲ. ಆದರೆ, ಅವರು ತಿಳಿದುಕೊಳ್ಳಲಿ. 2004ರಲ್ಲಿಯೇ ನಾನು ಅವರ ತಂದೆ ಪರ ಪ್ರಚಾರ ಮಾಡಿದ್ದೆ. ನಮ್ಮ ತಂದೆ ಬಂಗಾರಪ್ಪ ಅವರು ಬಿಜೆಪಿಗೆ ಬರದಿದ್ದರೆ ಈಗ ಬಿಜೆಪಿಯವರ ಅಡ್ರಸ್ಸೇ ಇರುತ್ತಿರಲಿಲ್ಲ. ವಿಜಯೇಂದ್ರ ಈಗ ಪ್ರಚಾರ ಮಾಡುತ್ತಿದ್ದಾರೆ. ನಾನು ಆಗಲೇ ಪ್ರಚಾರ ಮಾಡಿದ್ದೇನೆ. ನನ್ನ ಖಾಸಗಿತನಕ್ಕೆ ಕೈಹಾಕುವ ಮುನ್ನ ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದರು.