Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ಅಪೌಷ್ಟಿಕತೆ ನಿವಾರಣೆಗೆ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಸಚಿವ ಶರಣಪ್ರಕಾಶ್ ಪಾಟೀಲ್, ಮಕ್ಕಳು ಮತ್ತು ಮಹಿಳೆಯರಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ

ಅಪೌಷ್ಟಿಕತೆ ನಿವಾರಣೆಗೆ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಸಚಿವ ಶರಣಪ್ರಕಾಶ್ ಪಾಟೀಲ್,  ಮಕ್ಕಳು ಮತ್ತು ಮಹಿಳೆಯರಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ

ಬೆಂಗಳೂರು.ಮಕ್ಕಳು ಮತ್ತು ಮಹಿಳೆಯರಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆಯನ್ನು ಹೋಗಲಾಡಿಸುವುದೇ ಸವಾಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜೀವನೋಪಾಯ, ಕೌಶಲ್ಯಾಭಿವೃದ್ಧಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಕರೆ ನೀಡಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ನಡೆದ ಗ್ರಾಮೀಣಾಭಿವೃದ್ದಿ ಮಂತ್ರಾಲಯ, ರಾಷ್ಟ್ರೀಯ ಜೀವನೋಪಾಯ ಅಭಿಯಾನದ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಆಹಾರ ಪೌಷ್ಟಿಕತೆ, ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಅನಕ್ಷರತೆ ಮತ್ತು ಬಡತನವಿದ್ದು, ಬಡತನ ಇರುವವರಿಗೆ ಪೌಷ್ಠಿಕ ಆಹಾರ ಸಿಗುವುದು ಕಷ್ಟ. ಆರ್ಥಿಕವಾಗಿ ಸಬಲರಾದರೆ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ಸಾಧ್ಯವಾಗುತ್ತದೆ. ಇದನ್ನು ಅರಿತ ಸರ್ಕಾರ ಮಕ್ಕಳಲ್ಲಿನ ಪೌಷ್ಠಿಕಾಂಶದ ಕೊರತೆ ನೀಗಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆ ಹಣ್ಣು ಮತ್ತು ಚುಕ್ಕಿ ನೀಡಲಾಗುವುದು ಎಂದರು.
ನಮ್ಮ ಸರ್ಕಾರ ನವಜಾತ ಶಿಶುಗಳು, ಮಕ್ಕಳು, ಹರಿಹರಿಯದವರು, ಗರ್ಭಿಣಿಯರು, ತಾಯಂದಿರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ನಿವಾರಿಸಲು ಅನಿಮಿಯ ಮುಕ್ತ ಪೌಷ್ಟಿಕ ಕರ್ನಾಟಕ(ಎಎನ್‍ಪಿಕೆ) ಯೋಜನೆಯನ್ನು ಜಾರಿಗೆ ಮಾಡಿದೆ. ಇದರಿಂದ ಕ್ರಮೇಣವಾಗಿ ಸಾಕಷ್ಟು ಸುಧಾರಣೆಯಾಗುತ್ತದೆ ಎಂದು ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವುದೇ ಒಂದು ಯೋಜನೆ ಇಲ್ಲವೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಈ ಹಿಂದೆ 1999ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಪ್ರಾರಂಭಿಸಿದ ಸೀ ಶಕ್ತಿ ಸ್ವಸಹಾಯ ಗುಂಪು ಗ್ರಾಮೀಣ ಆರ್ಥಿಕ ಸುಧಾರಣೆಗೆ ಮುನ್ನುಡಿ ಬರೆದಿದೆ ಎಂದು ಸಚಿವರು ಪ್ರಶಂಸಿಸಿದರು.
ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ, ಸ್ವಸಹಾಯ ಸಂಘ ಸೇರಿದಂತೆ ಅನೇಕ ಸಂಘಗಳು ಆರ್ಥಿಕ ಸ್ವಾವಲಂಬನೆ, ಮಹಿಳೆಯರ ಸಬಲೀಕರಣಕ್ಕೆ ಒತ್ತು ಕೊಟ್ಟಿವೆ. ಇಂದಿನ ಸಮಾಜಕ್ಕೆ ಇಂತಹ ಸಂಘಗಳ ಅಗತ್ಯವಿದೆ ಎಂದು ಪಾಟೀಲ್ ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರ ಮಹಿಳೆಯರ ಸಬಲೀಕರಣದಲ್ಲಿ ದೇಶಕ್ಕೆ ಮಾದರಿಯಾಗಿದೆ. ನಮ್ಮಲ್ಲಿ ಅನುಷ್ಠಾನಗೊಂಡಿರುವ ಅನೇಕ ಯೋಜನೆಗಳು ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ದಿ ಪಡೆದಿವೆ ಎಂದು ಸಚಿವರು ಹೇಳಿದರು.

ಗಮನ ಸೆಳೆದ ವಸ್ತುಪ್ರದರ್ಶನ:
ಇನ್ನು ಕಾರ್ಯಗಾರ ನಿಮ್ಮಿತ್ತ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ ಎಲ್ಲರ ಗಮನಸೆಳೆಯಿತು. ಭಾರತ ವೈವಿಧ್ಯ ರಾಷ್ಟ್ರವಾದರೂ ವಿವಿಧತೆಯಲ್ಲಿ ಏಕತೆಯನ್ನು ಸಾರಿ ಹೇಳುವಂತಿತ್ತು. ವಸ್ತು ಪ್ರದರ್ಶನದಲ್ಲಿ ಅಸ್ಸಾಂ, ಸಿಕ್ಕಿಂ, ನಾಗಲ್ಯಾಂಡ್, ಮಿಜೋರಾಂ, ಪಶ್ಚಿಮ ಬಂಗಾಳ, ಮಣಿಪುರ, ಕೇರಳ, ಕರ್ನಾಟಕ ಸೇರಿದಂತೆ ಸುಮಾರು 19ಕ್ಕೂ ಹೆಚ್ಚು ರಾಜ್ಯಗಳು ಭಾಗವಹಿಸಿವೆ.
ಮಕ್ಕಳ ಪೌಷ್ಠಿಕತೆ ಹೆಚ್ಚಳ, ಶಿಶು ಮರಣ ತಡೆಗಟ್ಟುವಿಕೆ, ಬಾಣಂತಿಯರ ಆರೋಗ್ಯ ವೃದ್ಧಿ ಸೇರಿದಂತೆ ಸ್ಥಳೀಯವಾಗಿ ತಯಾರಿಸುವ ಉತ್ಪನ್ನಗಳ ಬಗ್ಗೆಯೂ ಒತ್ತು ಕೊಡಲಾಗಿದೆ.


ಕಾರ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಉಮಾ ಮಹದೇವನ್, ಗ್ರಾಮೀಣ ಜೀವನೋಪಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಸ್ಮತಿ ಶರಣ್, ರಾಷ್ಟ್ರೀಯ ಜೀವನೋಪಾಯ ಮಿಷನ್ ನಿರ್ದೇಶಕಿ ಪಿ.ಐ.ಶ್ರೀವಿದ್ಯಾ, ಕೆ.ಎಂ.ಎ.ಎಸ್ ಮುಖ್ಯ ನಿರ್ವಹಣಾಧಿಕಾರಿ ಅನುಪಮ ಮತ್ತಿತರರು ಹಾಜರಿದ್ದರು.

Megha News