ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಅವರು ಇದ್ದರೂ, ಹೆಚ್ಚುವರಿ ಮೂವರು ಡಿಸಿಎಂ ಅಗತ್ಯವಿದೆ. ಸಮುದಾಯವಾರು ಪ್ರಾತಿನಿಧ್ಯ ಕೊಡಬೇಕು ಎಂದು ದಲಿತ ಹಾಗೂ ಸಿಎಂ ಆಪ್ತ ಸಚಿವರು ತಮ್ಮ ಬೇಡಿಕೆಯನ್ನು ಬಹಿರಂಗವಾಗಿ ಪ್ರಚುರಪಡಿಸಿದ್ದಲ್ಲದೆ, ಹೈಕಮಾಂಡ್ ಮುಂದೆಯೂ ಇಟ್ಟಿದ್ದರು.
ಆದರೆ. ಈಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಪ್ರಸ್ತಾಪವು ಹೈಕಮಾಂಡ್ ಮುಂದೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ಮೂಲಕ ರಾಜ್ಯ ಸಚಿವರ ಹೇಳಿಕೆಗೆ ಪರೋಕ್ಷವಾಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಕಳೆದ ವಾರ ಡಿಸಿಎಂ ಹುದ್ದೆ ಸೃಷ್ಟಿ ಸಂಬಂಧ ಕೆಲವು ಸಚಿವರು ಬಹಿರಂಗ ಹೇಳಿಕೆ ನೀಡಿದ್ದರು. ಬಳಿಕ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಪಾಲಿಟಿಕ್ಸ್ ಸಹ ನಡೆದಿತ್ತು. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಡಿ.ಕೆ. ಶಿವಕುಮಾರ್ ಅವರ ಮತ್ತೊಂದು ಬಣವು ಹೈಕಮಾಂಡ್ ಗಮನಕ್ಕೆ ತಂದಿತ್ತು. ಅಲ್ಲದೆ, ಸಮರ್ಪಕ ಕ್ರಮ ತೆಗೆದುಕೊಳ್ಳುವಂತೆ ದೂರು ಸಲ್ಲಿಸಿದ್ದರು.
ದೂರು ನೀಡಿದ ಬೆನ್ನಲ್ಲೇ ರಾಜ್ಯಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಎಂಟ್ರಿ ಕೊಟ್ಟಿದ್ದರು. ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ, ಎಂ.ಬಿ. ಪಾಟೀಲ್ ಸೇರಿ ಕೆಲವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ವಾರ್ನಿಂಗ್ ಕೊಟ್ಟಿದ್ದಾರೆ.
3 ಡಿಸಿಎಂ ಹುದ್ದೆ ಬೇಕು ಎಂದಿದ್ದ ಸಚಿವರು
ದಲಿತ ಹಾಗೂ ಸಿಎಂ ಆಪ್ತ ಸಚಿವರ ಅಹವಾಲನ್ನು ಹೈಕಮಾಂಡ್ ಆಲಿಸಿದೆ. ಸೋಮವಾರ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಅಸಮಾಧಾನಿತ ಸಚಿವರ ತಂಡದ ಸಚಿವರ ಜತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿಯಾಗಬೇಕು ಎಂಬ ಬೇಡಿಕೆ ಇಟ್ಟಿರುವ ಈ ಗುಂಪು, ಯಾವುದೇ ಕಾರಣಕ್ಕೂ ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ.ಎಚ್. ಮುನಿಯಪ್ಪ, ಎಚ್.ಸಿ. ಮಹದೇವಪ್ಪ, ಕೆ.ಎನ್. ರಾಜಣ್ಣ, ದಿನೇಶ್ ಗುಂಡೂರಾವ್, ಎಂ.ಬಿ. ಪಾಟೀಲ್ ಜತೆಗೆ ಸುರ್ಜೇವಾಲ ಸಭೆ ನಡೆಸಿ ಅಸಮಾಧಾನ ತಣಿಸಲು ಯತ್ನಿಸಿದ್ದಾರೆ. ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಸಿದ್ದ ಕೆಲವು ಅಸಮಧಾನಿತ ಸಚಿವರು, ಸುರ್ಜೇವಾಲರನ್ನು ಭೇಟಿ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಸಮಯವನ್ನೂ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ.