ರಾಯಚೂರು ರೈತರು ನಿಸರ್ಗದೊಂದಿಗೆ ಹೋರಾಟ ಮಾಡಿ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಅವರಿಗೆ ಸೂಕ್ತ ಸಮಯದಲ್ಲಿ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಸೂಕ್ತ ಸಲಹೆಗಳನು ನೀಡಿ, ನೆರವಾಗಬೇಕೆಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಶರಣಗೌಡ ಬಯ್ಯಾಪೂರು ಅವರು ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಅಖಿಲ ಭಾರತ ಸಂಯೋಜಿತ ಬೀಜ ಸಂಶೋಧನಾ ಯೋಜನೆ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂಗಾರು ಬೀಜ ದಿನೋತ್ಸವ-2024ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ರೈತರಲ್ಲಿ ಗಟ್ಟಿತನ ಇರುತ್ತದೆ. ರೈತರು ಯಾವತ್ತೂ ಎದೆಗುಂದಬಾರದು. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಹತ್ತು ಕೆ.ಜಿ ನೆಲ್ಲು ಚೆಲ್ಲಿ ಹತ್ತು ಕ್ವಿಂಟಲ್ ಭತ್ತ ಬೆಳೆಯೋದು ರೈತರು ಮಾತ್ರ, ರೈತರು ತಮ್ಮ ಕಸುಬನ್ನು ಮರೆಯಬಾರದು. ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪ್ರಗತಿಪರ ರೈತರಾಗಬೇಕೆಂದು ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೈತರ ಹೊಲಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಸಂಶೋಧನೆ ಕೈಗೊಳ್ಳಬೇಕು. ರೈತರು ಬೆಳೆಯುವ ಬೆಳೆಗಳಿಗೆ ಸಲಹೆಗಳನ್ನು ಸೂಕ್ತ ಸಮಯದಲ್ಲಿ ನೀಡಬೇಕು. ರೈತರು ಕೃಷಿ ಕಾರ್ಯಗಳನ್ನು ಮನಸ್ಸಿನಿಂದ ಮಾಡಬೇಕು ಎಂದರು.
ಈ ವೇಳೆ ಮಾಜಿ ಶಾಸಕರು ಹಾಗೂ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಬಸನಗೌಡ ಬ್ಯಾಗವಾಟ್ ಅವರು ಮಾತನಾಡಿ, ರೈತರು ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯಬೇಕು. ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ಇಲಾಖೆ ವತಿಯಿಂದ ರೈತರು ಬೆಳೆಯುವ ಬೆಳೆಗಳ ಸಂಪೂರ್ಣ ಮಾಹಿತಿ ನೀಡಬೇಕು. ಬೀಜಗಳು ದೊರೆಯುವ ಕುರಿತು ಸೂಕ್ತ ಸಮಯದಲ್ಲಿ ಮಾಹಿತಿ ನೀಡಬೇಕು. ಕೆಲವು ಕಡೆ ಬೀಜಗಳಲ್ಲಿ ಮೋಸ ಮಾಡುವ ಸಂಭವ ಇರುತ್ತದೆ. ಈ ಹಿನ್ನಲೆಯಲ್ಲಿ ಅವರಿಗೆ ಮಾಧ್ಯಮಗಳ ಮೂಲಕ ಸೂಕ್ತ ರೀತಿಯ ಮಾಹಿತಿಯನ್ನು ನೀಡಬೇಕೆಂದು ಹೇಳಿದರು.