ಬೆಳಗಾವಿ: ಯಾವುದೇ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಕ್ಷಣೆ ಕೊಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರಾದ ಎನ್.ಎಸ್.ಬೋಸರಾಜು ಹೇಳಿದರು.
ವಿಧಾನ ಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಸದಸ್ಯರಾದ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಧಾರವಾಡ ಜಿಲ್ಲೆಯಲ್ಲಿ ಪಿಡಿಓ ಒಬ್ಬರು ಆರ್.ಟಿ.ಐ ಕಾರ್ಯಕರ್ತರೊಬ್ಬರಿಂದ ತೀವ್ರ ತೊಂದರೆ ಎದುರಿಸಿ ವಿಷ ಸೇವನೆ ಮಾಡಿ ಆಸ್ಪತ್ರೆ ಸೇರುವಂತಹ ಪರಿಸ್ಥಿತಿ ಬಂದೊದಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥ ಆರ್‌ಟಿಐ ಕಾರ್ಯಕರ್ತನ ಮೇಲೆ ಶಿಕ್ಷೆಯಾಗಿರುವುದಿಲ್ಲ. ಇಂತಹ ಕಿರುಕುಳ ಪ್ರಕರಣಗಳಿಂದ ಅಧಿಕಾರಿ ಸಿಬ್ಬಂದಿ ವರ್ಗದಲ್ಲಿ ದುಗುಡ ಮನೆ ಮಾಡಿದೆ ಎಂದು ಸಂಕನೂರ ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಪಿಡಿಓ ನಾಗರಾಜ ಗಿಣಿವಾಲ ಅವರ ಆರೋಗ್ಯದ ಬಗ್ಗೆ ವಿಚಾರಣೆ ಮಾಡಲಾಗಿದೆ. ಇಂತಹ ಪ್ರಕರಣಗಳು ಮರುಕಳಿಸದ ಹಾಗೆ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡ ಹಾಗೂ ಬಿಸಿಎಂ ವಸತಿ ನಿಲಯಗಳಲ್ಲಿ ಓದುವ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇದುವರೆಗೆ ಸಂಭ್ರಮ ಕಿಟ್ ನೀಡಿರುವುದಿಲ್ಲ ಎಂದು ಕೇಶವ್ ಪ್ರಸಾದ್ ಅವರು, ವಿಕಲಚೇತನರ ಶಾಲೆಯ ಶಿಕ್ಷಕರಿಗೆ ಭದ್ರತೆ ಇಲ್ಲದಂತಾಗಿದೆ. ವಿಶೇಷಚೇತನರ ಶಾಲೆಗೆ ಮೂಲಭೂತ ಸೌಕರ್ಯದ ಕೊರತೆಯ ಕಾರಣ ಇಂತಹ ಶಾಲೆಗಳ ಶಿಕ್ಷಕರಾಗಲು ಹಿಂದೇಟು ಹಾಕುವಂತಹ ಸ್ಥಿತಿ ಎದುರಾಗಿದ್ದು ವಿಶೇಷಚೇತನ ಶಿಕ್ಷಕರ ಬೇಡಿಕೆಗೆ ಸ್ಪಂದಿಸಬೇಕು ಎಂದು ಹೇಮಲತಾ ನಾಯಕ ಅವರು, ಮೈಸೂರ ಜಿಲ್ಲೆಯಲ್ಲಿ ಮೈಸೂರ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಹಣ ಕಟ್ಟಿದ್ದರೂ ಮಾಜಿ ಸೈನಿಕರು, ಸ್ವಾತಂತ್ರ‍್ಯ ಹೋರಾಟಗಾರರಿಗೆ ನಿವೇಶನಗಳನ್ನು ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಮಂಜೇಗೌಡ ಅವರು, ಸ್ತ್ರೀ ಶಕ್ತಿ ಯೋಜನೆ ಜಾರಿ ಬಳಿಕ ಮಕ್ಕಳಿಗೆ ತೊಂದರೆಯಾಗುತ್ತಿದೆ. ಶೈಕ್ಷಣಿಕ ಪ್ರವಾಸಕ್ಕೆ ತೆರಳಲು ಬಸ್‌ಗಳ ಕೊರತೆಯಾಗಿದೆ ಎಂದು ಹರೀಶಕುಮಾರ ಅವರು, ಬೆಂಗಳೂರಿನ ಕಲಾಸಿಪಾಳ್ಯ ಮತ್ತು ಕೆ.ಆರ್.ಮಾರುಕಟ್ಟೆ ಬಳಿಯಲ್ಲಿ ಪುಟ್‌ಪಾತ್ ತೆರವುಗೊಳಿಸಿ ಬೆಂಗಳೂರಿನ ಘನತೆ ಉಳಿಸಬೇಕು ಎಂದು ಟಿ.ಎ.ಶರವಣ ಅವರು, ಬಳ್ಳಾರಿ ಜಿಲ್ಲೆಯ ಕುರಗೋಡ ವಸತಿ ಶಾಲೆಗೆ ಮೂಲಭೂತ ಸೌಕರ್ಯಗಳ ಕೊರತೆಯಾಗಿದೆ ಎಂದು ಸತೀಶ ಅವರು, ವಿದ್ಯಾರ್ಥಿಗಳು ಕಷ್ಟಪಟ್ಟು ಪರೀಕ್ಷೆ ಬರೆದರೂ ಲೋಕಸೇವಾ ಆಯೋಗವು ಆಯ್ಕೆಪಟ್ಟಿಯನ್ನು ಪ್ರಕಟಿಸಲು ವಿಳಂಬ ಮಾಡಿ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯರಾದ ಶಶಿಲ್ ಜಿ ನಮೋಶಿ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.