ರಾಯಚೂರು: ನ.28 -ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ “ತೆರಿಗೆ ವಸೂಲಾತಿ ಅಭಿಯಾನ ಈಗಾಗಲೇ ಪ್ರಾರಂಭಿಸಿ ಕರ ವಸೂಲಾತಿಗಾಗಿ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿಧ್ದು ರಾಯಚೂರು ಜಿಲ್ಲೆಯ ಇತಿಹಾಸದಲ್ಲಿಯೇ ಗುರುವಾರ ಒಂದೇ ದಿನ 1ಕೋಟಿ 79ಲಕ್ಷ ರೂಗಳ ದಾಖಲೆಯ ತೆರಿಗೆ ವಸೂಲಿ ಮಾಡಿರುವುದಕ್ಕೆ ರಾಯಚೂರು ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತಿ ಸಲ್ಲಿಕೆ ಆಗಬೇಕಾಗಿರುವ ತೆರಿಗೆಯಲ್ಲಿ ಶೇ.100ರಷ್ಟು ವಸೂಲಿ ಮಾಡುವುದು ಗ್ರಾಮ ಪಂಚಾಯತಿಯ ಪ್ರಾಥಮಿಕ ಹೊಣೆಗಾರಿಕೆಯಾಗಿರುತ್ತದೆ. ಈ ದಿಸೆಯಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಕ್ರೂಢೀಕರಿಸಿಕೊಳ್ಳಲು ಕರವಸೂಲಾತಿ ಅಭಿಯಾನದ ಪ್ರಕ್ರಿಯೆಯನ್ನು ಒಂದು ವಿಶೇಷ ಆಂದೋಲನವನ್ನಾಗಿ ನಡೆಸಲು ನಿರ್ದೇಶನ ನೀಡಲಾಗಿತ್ತು.
ಅದರಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೆ ಕರ ವಸೂಲಾತಿ ಆಂದೋಲನ ಪ್ರಾರಂಭಿಸಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒ ಗಳು, ಕಾರ್ಯದರ್ಶಿಗಳು, ನೀರಗಂಟಿಗಳು ತಮ್ಮ ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿಯನ್ನೂ ಆರಂಭಿಸಿದ್ದು, ಮನೆಗಳು, ಅಂಗಡಿ ಮುಂಗಟ್ಟು, ಮಳಿಗೆಗಳಿಗೆ ತೆರಳಿ ಕರ ವಸೂಲಾತಿ ಕೈಗೊಂಡು ಒಂದೆ ದಿನದಲ್ಲಿ ದಾಖಲೆ ಕರ ಸಂಗ್ರಹಿಸಿದ್ದಾರೆ.
ರೂ.64,11,987 ರಾಯಚೂರು, ರೂ.41,48,443 ಸಿಂಧನೂರು, ರೂ.18,03,540 ಮಸ್ಕಿ, ರೂ.16,21,941 ಮಾನವಿ, ರೂ.12,05,943 ಲಿಂಗಸೂಗೂರು, ರೂ.11,55,254 ಸಿರವಾರ, ರೂ.8,07,994 ಅರಕೇರಾ, ಮತ್ತು ರೂ.7,48,720 ದೇವದುರ್ಗ ಒಟ್ಟು ಮೊತ್ತ ರೂ.1 ಕೋಟಿ 79 ಲಕ್ಷ ಸಂಗ್ರಹಿಸಿ, ನಿಗದಿತ ಗುರಿಗಿಂತ ಹೆ ಚ್ಚು ತೆರಿಗೆ ವಸೂಲಿ ಮಾಡಲಾಗಿದೆ. ಸದರಿ ಜಿಲ್ಲೆಯಾದ್ಯಂತ ನಿನ್ನೆ ಒಂದೇ ದಿನ 1ಕೋಟಿ 79ಲಕ್ಷ ರೂಗಳನ್ನು ತೆರಿಗೆ ವಸೂಲಿ ಮಾಡಿರುವುದು ವಿಶೇಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದರಲ್ಲಿ ರಾಯಚೂರು ತಾಲೂಕಿನ ಮರ್ಚಟ್ಹಾಳ ಮತ್ತು ಮನ್ಸಲಾಪೂರು ಗ್ರಾ.ಪಂಗಳು ಶೇ105/101, ಮಾನವಿ ತಾಲೂಕಿನ ನಕ್ಕುಂದ ಗ್ರಾ.ಪಂ ಶೇ97.72, ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಗ್ರಾ.ಪಂ ಶೇ93.18, ಸಿರವಾರ ತಾಲೂಕಿನ ಮಲ್ಲಟ್ ಗ್ರಾ.ಪಂ ಶೇ 91.11, ಅರಕೇರಾ ತಾಲೂಕಿನ ಮಲದಕಲ್ ಗ್ರಾ.ಪಂ ಶೇ86.28, ಮಸ್ಕಿ ತಾಲೂಕಿನ ವಟಗಲ್ ಗ್ರಾ.ಪಂ ಶೇ83.77, ಲಿಂಗಸೂಗೂರು ತಾಲೂಕಿನ ನಾಗರಹಾಳ ಗ್ರಾ.ಪಂ ಶೇ61.15 ಹಾಗೂ ದೇವದುರ್ಗ ತಾಲೂಕಿನ ಹೇಮನಾಳ ಗ್ರಾ.ಪಂ ಶೇ57.24 ಕರ ವಸೂಲಾತಿಯಲ್ಲಿ ಪ್ರಗತಿ ಸಾಧಿಸಲಾಗಿದೆ.
ರಾಯಚೂರು ತಾಲೂಕು ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರಗತಿ ಸಾಧಿಸಿರುವುದಕ್ಕೆ ಮಾನ್ಯ ಸಿಇಒ ಅಭಿನಂದನೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ. ಇನ್ನೂ ಇದೇ ರೀತಿಯಲ್ಲಿ ಹೆಚ್ಚಿನ ತೆರಿಗೆ ವಸೂಲಿ ಮಾಡುವಂತೆ ಸಲಹೆ ನೀಡಿದ್ದಾರೆ.