ರಾಯಚೂರು: ನಗರದ ನೀಲಕಂಠೇಶ್ವರ ಬಡಾವಣೆಯ ಶ್ರೀ ನೀಲಕಂಠೇಶ್ವರ ದೇವರ ರಥೋತ್ಸವ ರವಿವಾರ ಸಂಜೆ ಅಪಾರ ಭಕ್ತರ ಜಯಘೋಷಗಳ ಮಧ್ಯೆ ಸಂಭ್ರಮ ಸಡಗರ ಜೊತೆ ಅದ್ದೂರಿಯಾಗಿ ಜರುಗಿತು. ಜಾತ್ರಾ ನಿಮಿತ್ತ ಕಳೆದ ೧೫ ದಿನಗಳಿಂದ ಆರಂಭವಾಗಿದ್ದ, ಜ್ಞಾನದಾಸೋಹ, ಹೇಮರೆಡ್ಡಿ ಮಲ್ಲಮ್ಮ ಪುರಾಣ, ವಿವಿಧ ಧಾರ್ಮಿಕ ಕಾರ್ಯಕ್ರಮಗಳ, ಅಂತಿಮ ಭಾಗವಾಗಿ ಇಂದು ಜರುಗಿದ ರಥೋತ್ಸವಕ್ಕೆ ಸುತ್ತಮುತ್ತಲಿನ ಬಡಾವಣೆಯ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿ ಮೆರೆದರು. ರಥವನ್ನು ಬಾಳೆದಿಂಡು, ಮಾವಿನ ತೋರಣ, ಹೂಗಳಿಂದ ಸಿಂಗರಿಸಿ, ಛತ್ರಿ, ಚಾಮರಗಳಿಂದ ಸಿದ್ದಗೋಳಿಸಿ. ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮತ್ತು ಸೋಮವಾರಪೇಟೆ ಹಿರೇಮಠದ ಶ್ರೀ ರಾಚೋಟಿವೀರ ಶಿವಾಚಾರ್ಯರು ಪೂಜೆ ಸಲ್ಲಿಸುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಪಟಾಕಿಗಳು ಬಾನಂಗಳದಲ್ಲಿ ಬಗೆಬಗೆಯ ಚಿತ್ತಾರ ಮೂಡಿಸಿದರೆ. ‘ಶ್ರೀ ನೀಲಕಂಠೇಶ್ವರ ಮಹಾರಾಜಕೀ ಜೈ’, ನಂಬಿದವರಿಗೆ ವರ ನೀಡುವ ಹರ ಹರ’ ಎಂಬ ಭಕ್ತರು ಜಯಘೋಷ ಮೊಳಗಿಸಿದರು. ದೇವಸ್ಥಾನ ಮುಂಭಾಗದ ರಥಬೀದಿಯಲ್ಲಿ ಗಾಂಭೀರ್ಯ ವಾಗಿ ರಥ ಚಲಿಸಿ ಬಸವನಕಟ್ಟಿ ತಲುಪಿ ಪುನಃ ತನ್ನ ಮೂಲ ಸ್ಥಾನಕ್ಕೆ ಬಂದಿತು, ಇದನ್ನು ಕಂಡ ಭಕ್ತರು ಹರ್ಷೋದ್ಗಾರದಲ್ಲಿ ಚಪ್ಪಾಳೆತಟ್ಟಿ ಸಂಭ್ರಮಿಸಿದರು. ಇದಕ್ಕೂ ಮೊದಲು ಬೆಳಿಗ್ಗೆ ನೀಲಕಂಠೇಶ್ವರ ದೇವರಿಗೆ ದೇವಸ್ಥಾನದ ಅರ್ಚಕ ಶಂಕರಲಿಂಗ ಸ್ವಾಮಿ ವಿಶೇಷ ರುದ್ರಾಭಿಷೇಕ ನಡೆಸಿದರು. ನಿಂತರ ಬೋರಿಗಣಾರಾಧನೆ, ಅನ್ನಪ್ರಸಾದ ಸೇವೆ ಮಾಡಲಾಯಿತು. 41ನೇ ಕಾರ್ತಿಕ ಮಾಸದ ಅಂಗವಾಗಿ ರಥೋತ್ಸವ, ಉಚ್ಚಯ ಮಹೋತ್ಸವ, ದೀಪೋತ್ಸವ ಯಶಸ್ವಿಯಾಗಿ ಮುಕ್ತಾಯವಾಗಲು ನೀಲಕಂಠೇಶ್ವರ ಸೇವಾ ಸಮಿತಿ, ಮಹಿಳಾ ಮಂಡಳಿ, ಯುವಕ ಮಂಡಳಿ, ಕಾರಣೀಭೂತರಾಗಿದ್ದಾರೆ. ಈ ಸಂದರ್ಭದಲ್ಲಿ ಸೇವಾಸಮಿತಿ ಅಧ್ಯಕ್ಷ ಸೂಗುರೇಶ ಸಾಲಿಮಠ, ಗೌರವ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಪದಾಧಿಕಾರಿಗಳು ಮತ್ತು ಬಡಾವಣೆಯ ನಿವಾಸಿಗಳಾದ ಮಲ್ಲಿಕಾರ್ಜುನ ನಾಡಗೌಡ, ಸಿದ್ರಾಮರೆಡ್ಡಿ, ಶಂಕರಗೌಡ, ಅಶೋಕಪ್ಪ ಗೌಡ ಮಿರ್ಜಾಪುರ್, ಬಿ.ಎಸ್ ಸುರಗಿಮಠ, ಪಿ. ಮಹಾಂತೇಶ್, ರವೀಂದ್ರ ರೆಡ್ಡಿ, ಸಂಗಯ್ಯ ಸೊಪ್ಪಿಮಠ, ಸಿದ್ದರಾಮಯ್ಯ ಗುಡಿಮಠ, ಪುಂಡಿ ಮಂಜುನಾಥ, ಪ್ರೇರಣ ಬಸವರಾಜ್, ಹಾಗೂ ನೂರಾರು ಸಂಖ್ಯೆಯ ಭಕ್ತಾದಿಗಳು ರಥೋತ್ಸವವನ್ನು ಕಣ್ತುಂಬಿಕೊಂಡು ಶ್ರೀ ನೀಲಕಂಠೇಶ್ವರ ಕೃಪೆಗೆ ಪಾತ್ರರಾದರು.
Megha News > Local News > ಅದ್ದೂರಿಯಾಗಿ ಜರುಗಿದ ಶ್ರೀ ನೀಲಕಂಠೇಶ್ವರನ ರಥೋತ್ಸವ