ರಾಯಚೂರು, ರಣ ಬಿಸಿಲಿನಿಂದ ತತ್ತರಿಸಿ ಕುಡಿಯುವ ನೀರಿನ ಹಾಹಾಕಾರ ಎದುರಿಸುತ್ತಿದ್ದ ಜನರಿಗೆ ಮಳೆಯಾಗುತ್ತಿರುವದು ನೀರಿನ ದಾಹ ಇಂಗಿಸಲು ಕಾರಣವಾಗಿದ್ದರೆ, ಕಲುಷಿತ ನೀರು ಪೂರೈಕೆಯಾಗುತ್ತಿರುವದು ಆತಂಕಕ್ಕೆ ಕಾರಣವಾಗಿದೆ.
ನಗರದಲ್ಲಿ ಕಲುಷಿತ ನೀರು ಸೇವನೆಯಿಂದ ಕಳೆದ ಬಾರಿ ನಾಲ್ಕು ಜನ ಮೃತಪಟ್ಟಿದ್ದು ಅನೇಕರು ಆರೋಗ್ಯ ಸಮಸ್ಯೆ ಎದುರಿಸಿದ್ದ ಪ್ರಕರಣ ಹೈಕೋರ್ಟ ಮೆಟ್ಟಿಲೇರಿದೆ. ಎಲ್ಲವೂ ಸರಿಪಡಿಸಲಾಗಿದೆ ಎಂದು ಹೇಳಿಕೊಂಡಿದ್ದ ಆಡಳಿತ ವ್ಯವಸ್ಥೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸಲು ಸಾಧ್ಯವಾಗಿಲ್ಲ. ಮಳೆ ಪ್ರಾರಂಭವಾದ ನಂತರ ಕೃಷ್ಣ ನದಿಗೆ ಹರಿದು ಬಂದ ನೀರು ನೇರವಾಗಿ ಸಾರ್ವಜನಿಕರಿಗೆ ಪೂರೈಕೆ ಪ್ರಾರಂಭವಾಗಿದೆ. ಕಳೆದರಡು ದಿನಗಳಿಂದ ಅಶುದ್ದವಾದ ನೀರು ಪೂರೈಕೆಯಾಗುತ್ತಿರುವದು ಆತಂಕಕ್ಕೆ ಕಾರಣವಾಗಿದೆ.
ನಗರಕ್ಕೆ ನೀರು ಪೂರೈಸುವ ಚಿಕ್ಕಸೂಗೂರು ಹಾಗೂ ರಾಂಪೂರು ಜಲಾಶಯದಿಂದ ಪೂರೈಕೆಯಾಗುವ ನೀರಿನ ಶುದ್ದೀಕರಣ ಕ್ರಮಬದ್ದವಾಗಿ ನಿರ್ವಹಣೆಯಾಗದೇ ಇರುವದರಿಂದ ಮತ್ತೊಮ್ಮೆ ಆತಂಕ ಎದುರಾಗುವಂತಾಗಿದೆ. ಕಲುಷಿತ ನೀರು ಘಟನೆಯಿಂದ ನಗರದ ಎಲ್ಲಾ ನೀರಿನ ಟ್ಯಾಂಕ್‌ಗಳ ಸ್ವಚ್ಚತೆ,ನೀರು ನಿರ್ವಹಣಾ ವ್ಯವಸ್ಥೆ ಸುಧಾರಿಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಯಿತು. ಕೆಲ ದಿನ ಮಾತ್ರ ಸಮರ್ಪಕ ನಿರ್ವಹಣೆ ನಿರ್ವಹಿಸಿದ ನಗರಸಭೆ ಬದಲಾದ ಆಡಳಿತ ವ್ಯವಸ್ಥೆಯಿಂದ ಕ್ರಮೇಣ ಯಥಾಸ್ಥಿತಿಗೆ ಬಂದು ನಿಂತಿದೆ. ಕಲುಷಿತ ನೀರು ಪೂರೈಕೆ ವಿಷಯದಲ್ಲಿ ಕೆಲ ಅಧಿಕಾರಿಗಳ ಅಮಾನತ್‌ಗೊಳಿಸಲಾಯಿತು. ಆದರೆ ವ್ಯವಸ್ಥೆಯಲ್ಲಿ ಕಾಣಬೇಕಿದ್ದ ಸುಧಾರಣೆ ಮಾತ್ರ ನಡೆಯಲೇ ಇಲ್ಲ. ಕುಡಿಯುವ ನೀರಿನ ಸಂಪರ್ಕ ಜಾಲದಲ್ಲಿ ಚರಂಡಿ ನೀರು ಸೇರುತ್ತಿರುವದು, ಅಶುದ್ದವಾದ ಕುಡಿಯುವ ನೀರು ಪೂರೈಕೆಯನ್ನು ತಡೆಯಲು ಯಾವುದೇ ಎಚ್ಚರಿಕೆ ಕ್ರಮ ಕೈಗೊಂಡಿಲ್ಲ. ನಗರಸಭೆ ಆಡಳಿತ ವ್ಯವಸ್ಥೆ ಇಲ್ಲದೇ ಇರುವದರಿಂದ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎರಡು ನದಿಗಳಿದ್ದರೂ ಎರಡು ದಿನಕ್ಕೊಮ್ಮೆ ನೀರು ಪೂರೈಸುವದು ನಡೆಯುತ್ತಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾದಲ್ಲಿ ನೀರಿ ಪೂರೈಕೆಯಲ್ಲ ಬದಲಾವಣೆಯಾಗಬಹುದು. ಆದರೆ ಶುದ್ದ ಕುಡಿಯುವ ನೀರನ ಪೂರೈಕೆಗೆ ಬೇಕಿರುವ ವೈಜ್ಞಾನಿಕ ಕ್ರಮಗಳು ನಗರಸಭೆ ಗಂಬೀರವಾಗಿ ಪರಿಗಣಿಸದೇ ಇರುವದು ಸಮಸ್ಯೆಗೆ ಕಾರಣವಾಗಿದೆ.
ಮತ್ತೊಂದಡೆ ಸಾವಿರಾರು ಕೋಟಿ ರೂ ವೆಚ್ಚದಲ್ಲಿ ಜಾರಿಗೊಳಿಸಲಾಗಿರುವ ೨೪ ಗಂಟೆ ಕುಡಿಯುವ ನೀರಿನ ಯೋಜನೆ ಕುಂಟುತ್ತಾ ಸಾಗಿದೆ. ಗುತ್ತಿಗೆದಾರರ ಸಮಸ್ಯೆ ನೀಗಿಸಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಮೂರುಸರ್ಕಾರಗಳು ಬದಲಾದರೂ ಸಮಸ್ಯೆ ಮಾತ್ರ ನೀಗಿಲ್ಲ. ಸಾಲದ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಅಪೂರ್ಣವಾಗಿಯೇ ಉಳಿದಿದೆ. ಮತ್ತೊಂದಡೆ ಶುದ್ದವಾದ ನೀರು ಇನ್ನೂ ದೊರೆಯದೇ ಹೋಗಿದೆ. ಮಳೆ ಹೆಚ್ಚಳವಾಗುತ್ತಿರುವರಿಂದ ನೀರು ಮತ್ತಷ್ಟು ಕಲುಷಿತವಾಗುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲಾಡಳಿತ ಮತ್ತು ನಗರಸಭೆ ಶುದ್ದ ಕುಡಿಯುವ ನೀರಿನ ಪೂರೈಕೆ ವಿಶೇಷ ಗಮನ ನೀಡಬೇಕನ್ನುವದು ಸಾರ್ವಜನಿಕರ ಒತ್ತಾಯವಾಗಿದೆ.
Megha News > Local News > ಇನ್ನೂ ಮರೀಚಿಕೆಯಾಗಿಯೇ ಉಳಿದ ಶುದ್ದ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಮಳೆಯಿಂದ ಕಲುಷಿತ ನೀರು ಪೂರೈಕೆಯಿಂದ ಎದುರಾದ ಆತಂಕ
ಇನ್ನೂ ಮರೀಚಿಕೆಯಾಗಿಯೇ ಉಳಿದ ಶುದ್ದ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಮಳೆಯಿಂದ ಕಲುಷಿತ ನೀರು ಪೂರೈಕೆಯಿಂದ ಎದುರಾದ ಆತಂಕ
Tayappa - Raichur11/06/2024
posted on
Leave a reply