ಕಲಬುರಗಿ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದು ಶತಸಿದ್ಧ. ನಮ್ಮ ಸರ್ಕಾರದ 5 ವರ್ಷದ ಅವಧಿಯಲ್ಲಿ ಚುನಾವಣಾ ಪೂರ್ವ ನೀಡಿದ ಎಲ್ಲಾ ಭರವಸೆ ಈಡೇರಿಸಲಾಗುವುದು. ಬುದ್ಧ, ಬಸವ, ಅಂಬೇಡ್ಕರ, ಗಾಂಧಿ, ಕುವೆಂಪು ಅವರ ಆಶಯ ಮತ್ತು ತತ್ವದಂತೆ ನುಡಿದಂತೆ ನಡೆಯುತ್ತೇವೆ. ಇದುವೇ ಕರ್ನಾಟಕ ಮಾದರಿ ಆಡಳಿತ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ಕಲಬುರಗಿ ನಗರದ ಎನ್.ವಿ.ಮೈದಾನದಲ್ಲಿ ಇಂಧನ ಇಲಾಖೆ ಆಯೋಜಿಸಿದ ಪಂಚ ಗ್ಯಾರಂಟಿಯಲ್ಲಿ ಒಂದಾದ ಗರಿಷ್ಠ 200 ಯೂನಿಟ್ ಉಚಿತವಾಗಿ ಒದಗಿಸುವ ಉಚಿತ ಬೆಳಕು, ಸುಸ್ಥಿರ ಬದುಕು ಎಂಬ ಧ್ಯೇಯವಾಕ್ಯದ “ಗೃಹ ಜ್ಯೋತಿ” ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ 10 ಜನರಿಗೆ ಶೂನ್ಯ ದರದ ವಿದ್ಯುತ್ ಬಿಲ್ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಮುಂದಿನ 5 ವರ್ಷದಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ 76 ಭರವಸೆಗಳನ್ನು ಈಡೇರಿಸಲಾಗುವುದು. ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳು ಸಮ-ಸಮನಾಗಿ ನಡೆಯಲಿವೆ. ಯಾವುದೇ ಅನುದಾನ ಕೊರತೆ ಇಲ್ಲ. ಇದರಲ್ಲಿ ಅನುಮಾನ ಬೇಡ ಎಂಬ ಸ್ಪಷ್ಟವಾದ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.
ಪಂಚ ಗ್ಯಾರಂಟಿ ಜಾರಿ ಬಗ್ಗೆ ವಿರೋಧ ಪಕ್ಷಗಳು ರಾಜ್ಯ ದಿವಾಳಿಯಾಗುತ್ತದೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಯೂರೋಪ್ ದೇಶದಲ್ಲಿನ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯಲ್ಲಿಯೇ ಈ ಐದು ಗ್ಯಾರಂಟಿ ಜಾರಿಗೆ ತರಲಾಗುತ್ತಿದೆ. ಇದರಿಂದ ರಾಜ್ಯದ ದಿವಾಳಿಯಾಗಲ್ಲ, ಬದಲಾಗಿ ಜನರು ಕೊಂಡುಕೊಳ್ಳುವ ಶಕ್ತಿ ಹೆಚ್ಚಲಿದೆ. ಗೃಹ ಲಕ್ಷ್ಮಿ ಯೊಜನೆಯಡಿ ಮಾಸಿಕ 2,000 ರೂ., 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ, ಅನ್ನ ಭಾಗ್ಯ, ಯುವ ನಿಧಿ ಈ ಯೋಜನೆಗಳ ಜಾರಿ ಪರಿಣಾಮ ರಾಜ್ಯದ ಜಿಡಿಪಿ, ಆರ್ಥಿಕ ಚಟುವಟಿಕೆ ಜಾಸ್ತಿಯಾಗುತ್ತದೆ. ಐದು ಗ್ಯಾರಂಟಿಗಳಿಂದ ಮಾಸಿಕ ಒಬ್ಬರಿಗೆ 4 ರಿಂದ 5 ಸಾವಿರ ರೂ. ದೊರೆತರೆ, ವಾರ್ಷಿಕ 48 ರಿಂದ 60 ಸಾವಿರ ರೂ. ಲಭಿಸಲಿದೆ ಎಂದು ತಿಳಿಸಿದರು.
Megha News > State News > ನಾವು ನುಡಿದಂತೆ ನಡೆಯುತ್ತೇವೆ, ಇದುವೇ ಕರ್ನಾಟಕ ಮಾದರಿ ಆಡಳಿತ: ಸಿ.ಎಂ ಸಿದ್ದರಾಮಯ್ಯ
ನಾವು ನುಡಿದಂತೆ ನಡೆಯುತ್ತೇವೆ, ಇದುವೇ ಕರ್ನಾಟಕ ಮಾದರಿ ಆಡಳಿತ: ಸಿ.ಎಂ ಸಿದ್ದರಾಮಯ್ಯ
Tayappa - Raichur05/08/2023
posted on
Leave a reply