ಸಿಂಧನೂರು: ಮಹಾರಾಷ್ಟ್ರದ ಪುಣೆಯಲ್ಲಿ ಏಳು ಜನರನ್ನು ಅಪಹರಿಸಿ ತಲಾ 1 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಮೂವರು ಅಪಹರಣಕಾ ರರನ್ನು ಸಿಂಧನೂರು ತಾಲ್ಲೂಕಿನ ಕುನ್ನಟಗಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಪಹರಣಕ್ಕೆ ಒಳಗಾಗಿದ್ದ ನಾಲ್ವರು ಯುವಕ ರನ್ನು ರಕ್ಷಿಸಲಾಗಿದೆ.
ಪುಣೆಯ ದೇವಸ್ಥಾನವೊಂದರಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ಏಳು ಜನರನ್ನು ಮಹಾರಾ ಷ್ಟ್ರದ ಸಾಂಗ್ಲಿ ಜಿಲ್ಲೆಯ ಜಂತ ತಾಲ್ಲೂಕಿನ ತಿಕ್ಕುಂದಿ ಗ್ರಾಮದ ರಾಮು ಅಪ್ಪರಾಜು, ದತ್ತ ಶಿವಾಜಿ, ಹರ್ಷಕ ಸುರೇಶ ಪಾಟೀಲ್ ಮತ್ತಿತರರು ಸೇರಿ ಅಪಹರಿಸಿದ್ದಾರೆ. ಮುಖ್ಯ ಆರೋಪಿ ರಾಮು ಪತ್ನಿಯ ಸಂಬಂಧಿ ವಾಸು ಅವರ ಸಹಕಾರದಿಂದ ಸಿಂಧನೂರು ತಾಲ್ಲೂಕಿನ ಕುನ್ನಟಗಿ ಗ್ರಾಮದ ಮನೆಯೊಂದರಲ್ಲಿ ನಾಲ್ವರನ್ನು ಕೂಡಿ ಹಾಕಿಡಲಾಗಿತ್ತು. ಉಳಿದ ಮೂವರನ್ನು ಸಾಂಗ್ಲಿಗೆ ಕರೆದೊಯ್ಯಲಾಗಿತ್ತು ಎಂದು ಹೇಳಾಗಿದೆ.
ಸಂತ್ರಸ್ತರ ಕಡೆಯವರಿಗೆ ಭಾನುವಾರ ಸಂಜೆ ಕರೆ ಮಾಡಿ ಅಪಹರಣಕ್ಕೆ ಒಳಗಾದವರನ್ನು ಬಿಡಬೇಕಾದರೆ ತಲಾ 1 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಪೋಷಕರು ಪುಣೆಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪುಣೆಯ ಪೊಲೀಸರು ಮೊಬೈಲ್ ಟ್ರ್ಯಾಕ್ ಮಾಡಿ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಸಿಂಧನೂರು ಸರ್ಕಲ್ ಇನ್‌ಸ್ಪೆಕ್ಟರ್ ವೀರಾರೆಡ್ಡಿ, ಗ್ರಾಮೀಣ ಪೊಲೀಸ್ ಠಾಣೆಯ ಸಬ್‍ಇನ್‌ಸ್ಪೆಕ್ಟರ್ ಮಹ್ಮದ್ ಇಸಾಕ್ ನೇತೃತ್ವದ ತಂಡ ಮತ್ತು ಪುಣೆಯ ಪೊಲೀಸರ ತಂಡ ಜಂಟಿ ಕಾರ್ಯಾಚರಣೆ ನಡೆಸಿತ್ತು.