ಮಧ್ಯಪ್ರದೇಶ( ಸಾಗರ್ ಜಿಲ್ಲೆ). ಒಂದು ರೂಪಾಯಿಗೆ ಈ ಕಾಲದಲ್ಲಿ ಏನು ಬರುತ್ತೆ ಎಂದು ಯೋಚಿಸಿದ್ರೆ ಒಂದು ಚಾಕೊಲೆಟ್ ಬರಬಹುದು ಅದಕ್ಕಿಂತ ದೊಡ್ಡ ಉಪಯೋಗವೇನು ಇಲ್ಲ ಎಂಬ ಮಾತನಾಡುವುದು ಸಾಮಾನ್ಯ. ಹಾಗೆ 1 ರೂಪಾಯಿ ಚಿಲ್ಲರೆ ಇಲ್ಲವೆಂದು ಅಂಗಡಿಯಲ್ಲಿ ಚಾಕೊಲೆಟ್ ನೀಡುವುದು, ಬಸ್‌ನಲ್ಲಿ ಕಂಡಕ್ಟರ್ ಚಿಲ್ಲರೆ ನೀಡಲು ನಿರಾಕರಿಸುವುದು ನಾವು ನೋಡಿರುತ್ತೇವೆ.
ನಾವು ಕೂಡ 1 ರೂಪಾಯಿ ಹೋದರೆ ಹೋಗಲಿ ಎಂಬ ಮನೋಭಾವದಲ್ಲೇ ಇರುತ್ತೇವೆ.
ಆದ್ರೆ ಇಲ್ಲೊಬ್ಬ ವ್ಯಕ್ತಿ ಇದೇ 1 ರೂಪಾಯಿಗಾಗಿ ಬರೋಬ್ಬರಿ 8 ವರ್ಷಗಳ ಕಾಲ ಕೋರ್ಟು ಕಚೇರಿ ಎಂದು ಸುತ್ತಾಡಿ ಕೊನೆಗೂ ಕೇಸ್ ಗೆದ್ದಿರುವ ಅಚ್ಚರಿಯ ಪ್ರಕರಣವಿದು. ನಿಮಗೇನಾದರು 1 ರೂಪಾಯಿ ಯಾರಾದರು ಚಿಲ್ಲರೆ ನೀಡಲಿಲ್ಲ ಅಂದರೆ ಇಟ್ಟುಕೊಳ್ಳಿ ಎಂದು ಹೇಳಬಹುದು. ಇಲ್ಲವೆ ಅದನ್ನು ಕೇಳಲು ಸಹ ಹೋಗುವುದಿಲ್ಲ.
ಆದ್ರೆ ಇಲ್ಲೊಬ್ಬ ತನಗಾದ 1 ರೂಪಾಯಿ 50 ಪೈಸೆ ಚಿಲ್ಲರೆ ವಸೂಲಿಗಿಳಿದು 8 ವರ್ಷದ ಬಳಿಕ ಪ್ರಕರಣದಲ್ಲಿ ಗೆದ್ದು ಪರಿಹಾರ ಕೂಡ ಪಡೆದುಕೊಂಡಿದ್ದಾನೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಚಕ್ರೇಶ್ ಜೈನ್ ಎಂಬಾತ ಇಂತಹ ಚಿಲ್ಲರೆ ಇಲ್ಲ ಎಂದು ಹೇಳಿದ್ದ ಗ್ಯಾಸ್ ಏಜೆನ್ಸಿ ವಿರುದ್ಧ ಗ್ರಾಹಕರ ಹಕ್ಕುಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಗೆದ್ದು ಬೀಗಿದ್ದಾರೆ.
ಏನಿದು 1 ರೂಪಾಯಿ ಪ್ರಕರಣ?
ಚಕ್ರೇಶ್ ಜೈನ್ ಭಾರತ್ ಗ್ಯಾಸ್ ಏಜೆನ್ಸಿ ಮೂಲಕ ಗ್ಯಾಸ್ ಬುಕ್ ಮಾಡಿದ್ದ ಪ್ರಕರಣವಿದು. ನವೆಂಬರ್ 14, 2017ರಂದು ಗ್ಯಾಸ್ ಸಿಬ್ಬಂದಿ 753.50 ರೂಪಾಯಿ ಬಿಲ್ ಬದಲಿಗೆ ಚಕ್ರೇಶ್ ಬಳಿ 755 ರೂಪಾಯಿ ಪಡೆದಿದ್ದರು, ಹಾಗೆ 1.50 ಪೈಸೆ ಇಲ್ಲವೆಂದು ತಿಳಿಸಿ ಅಲ್ಲಿಂದ ತೆರಳಿದ್ದರು. ಹಾಗೆ ಚಿಲ್ಲರೆ ಬೇಕಾದರೆ ಏಜೆನ್ಸಿಗೆ ಬಂದು ಪಡೆಯಿರಿ ಎಂಬ ಉದ್ಧಟತನ ಮೆರೆದು ಆತ ಅಲ್ಲಿಂದ ತೆರಳಿದ್ದ.
ಇದರಿಂದ ಕೋಪಗೊಂಡಿದ್ದ ಚಕ್ರೇಶ್ ವಕೀಲರ ಬಳಿ ಚರ್ಚಿಸಿ ಗ್ರಾಹಕರ ಹಕ್ಕುಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರು, ಇಷ್ಟಾದ ಬಳಿಕವೂ ಗ್ಯಾಸ್ ಏಜೆನ್ಸಿ ಚಕ್ರೇಶ್ ಅವರ ನಿರ್ಧಾರ ಕುರಿತು ಕುಹಕವಾಡಿತ್ತು, ಕೇವಲ ಚಿಲ್ಲರೆಗಾಗಿ ಕೋರ್ಟ್ ಮೆಟ್ಟಿಲೇರಿರುವ ವ್ಯಕ್ತಿಯ ಕುರಿತು ತಮಾಷೆಯಾಗಿ ತೆಗೆದುಕೊಂಡಿತ್ತು. ಈ ಪ್ರಕರಣದ ಆರಂಭದಲ್ಲಿ ಚಕ್ರೇಶ್ ಪರವಾಗಿ ಯಾವ ಕಲಸವೂ ನಡೆಯಲಿಲ್ಲ. ಹೀಗಾಗಿ ಚಕ್ರೇಶ್ 2019ರಲ್ಲಿ ಜಿಲ್ಲಾ ಗ್ರಾಹಕರ ವೇದಿಕೆ ಮೆಟ್ಟಿಲೇರಿದರು.
ಇಲ್ಲಿ ಸುಧೀರ್ಘ 5 ವರ್ಷಗಳ ವಿಚಾರಣೆ ನಡೆದಿತ್ತು. ಚಕ್ರೇಶ್ ಕೋರ್ಟ್‌ನಲ್ಲಿ ವಿಚಾರಣೆಗಾಗಿ ಅಲೆದಾಡುತ್ತಲೇ ಇದ್ದರು. ಹಾಗೆ ಎಲ್ಲಾ ವಿಚಾರಣೆಗಳ ಬಳಿಕ ಗ್ರಾಹಕರ ವೇದಿಕೆ ಚಕ್ರೇಶ್ ಅವರ ಪ್ರಕರಣದಲ್ಲಿ ಅವರ ಪರವಾಗಿಯೇ ತೀರ್ಪು ಸಹ ನೀಡಿತು, ಇಲ್ಲಿ ಗ್ಯಾಸ್ ಏಜೆನ್ಸಿ ಚಿಲ್ಲರೆ ವಿಚಾರವಾಗಿ ಉದ್ದೇಶ ಪೂರ್ವಕವಾಗಿ ನಡೆದುಕೊಂಡಿದೆ.
ಚಕ್ರೇಶ್‌ಗೆ 1.50 ಪೈಸೆಯನ್ನು ವಾರ್ಷಿಕ ಶೇ.6ರಷ್ಟು ಬಡ್ಡಿ ಸಮೇತ ವಾಪಾಸು ನೀಡಬೇಕು. ಎರಡು ತಿಂಗಳ ಒಳಗೆ ಈ ಹಣ ನೀಡಬೇಕು. ಹಾಗೆ ಜೈನ್ ಅವರು ಎದುರಿಸಿದ ಮಾನಸಿಕ, ದೈಹಿಕ , ಆರ್ಥಿಕ ಸಮಸ್ಯೆ, ಸೇವಾ ಸಂಬಂಧಿತ ಸಂಕಷ್ಟಗಳಿಗೆ ಪರಿಹಾರವಾಗಿ 2 ಸಾವಿರ ರೂಪಾಯಿ, ಹಾಗೂ ಅವರ ಕಾನೂನಾತ್ಮಕ ವೆಚ್ಚಗಳನ್ನು ಏಜೆನ್ಸಿಯೇ ಭರಿಸಬೇಕು ಎಂಬ ಮಹತ್ವದ ತೀರ್ಪು ನೀಡಿತು.
ಇದು ಕೇವಲ 1 ರೂಪಾಯಿಗಾಗಿ ನಡೆದ ಹೋರಾಟ ಆಗಿರಲಿಲ್ಲ ಬದಲಿಗೆ ನಮ್ಮ ಹಕ್ಕುಗಳಿಗಾಗಿ ನಡೆದ ಹೋರಾಟವಾಗಿತ್ತು ಎಂದು ಪ್ರಕರಣ ಗೆದ್ದ ಚಕ್ರೇಶ್ ಹೇಳಿಕೊಂಡಿದ್ದಾರೆ.