ಮುಜಾಫರ್ಪುರ್. (ಏಜೆನ್ಸಿಸ್) ದೈಹಿಕ ಸಂಬಂಧಕ್ಕೆ ಒಪ್ಪದ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಮಹಿಳೆಯೊಬ್ಬಳು ಠಾಣೆಯ ಮೆಟ್ಟಿಲೇರಿ ಎಫ್‌ಐಆರ್ ದಾಖಲಿಸಿರುವ ವಿಚಿತ್ರ ಘಟನೆ ಬಿಹಾರದ ಮುಜಾಫರ್ಪುರ್ನಲ್ಲಿ ನಡೆದಿದೆ.
ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಗಂಡನು ಸೇರಿದಂತೆ ಒಟ್ಟು 6 ಮಂದಿಯ ವಿರುದ್ಧ ದೂರು ದಾಖಲಾಗಿದೆ. ಸಂತಸ್ರೆಯು ವೈಶಾಲಿ ಜಿಲ್ಲೆಯ ಲಾಲ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದವಳು.
2021ರ ಮೇ 31ರಂದು ಮದುವೆಯಾದೆ. ಬಳಿಕ ನನ್ನ ಗಂಡನ ಮನೆಗೆ ಹೋದೆ. ಮದುವೆಯಾದ ಬಳಿಕ ಎರಡು ವರ್ಷದಿಂದ ಗಂಡ ನನ್ನೊಂದಿಗೆ ಯಾವುದೇ ದೈಹಿಕ ಸಂಬಂಧವನ್ನು ಇಟ್ಟುಕೊಂಡಿಲ್ಲ. ಈ ವಿಚಾರವನ್ನು ನನ್ನ ಅತ್ತೆ-ಮಾವರಿಗೂ ತಿಳಿಸಿದೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ನಾನು ನನ್ನ ಪತಿಯನ್ನು ಪ್ರಶ್ನಿಸಿದಾಗ ನನ್ನ ಮೇಲೆ ದೌರ್ಜನ್ಯ ನಡೆಸಲಾಯಿತು. ನಾನು ತವರು ಮನೆಗೆ ಹಿಂತಿರುಗಲು ನಿರ್ಧರಿಸಿದಾಗ, ನನಗೆ ಕೊಲೆ ಬೆದರಿಕೆ ಸಹ ಹಾಕಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಸಾಕಷ್ಟು ಬಾರಿ ಆಪ್ತ ಸಮಾಲೋಚನೆ ನಡೆಸಿದರೂ ಪರಿಸ್ಥಿತಿ ಮಾತ್ರ ಹಾಗೆಯೇ ಇದೆ. ಕೊನೆಯ ಆಯ್ಕೆ ಎಂಬಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಲ್ಲರ ಹೇಳಿಕೆಗಳನ್ನು ಪರಿಶೀಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 323, 498ಎ, 379, 504, 506, 34ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸಂತ್ರಸ್ತೆಯು ತನ್ನ ಮದುವೆಯನ್ನು ರದ್ದು ಮಾಡಿ, ವೈಶಾಲಿ ಜಿಲ್ಲೆಯಲ್ಲಿರುವ ತನ್ನ ಪಾಲಕರ ಮನೆಗೆ ಮರಳಲು ಬಯಸಿದ್ದಾಳೆ. ಆದರೆ, ಗಂಡನ ಮನೆ ಬಿಟ್ಟು ಬಂದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಗಳಿಗೆ ಸಂತ್ರಸ್ತೆ ಹೆದರಿದ್ದಾಳೆ. ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಬಹುದಾದ ಮತ್ತು ಪರಿಹಾರವನ್ನು ಕಂಡುಕೊಳ್ಳುವ ಯಾವುದೇ ಸಣ್ಣ ಪ್ರಯತ್ನವನ್ನು ಸಹ ಬಿಡಲಿಲ್ಲ. ಆದರೆ ಯಾವುದು ಕೂಡ ಪ್ರಯೋಜನಕ್ಕೆ ಬಾರಲಿಲ್ಲ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾಳೆ.
ನನ್ನ ಸಹನೆಯನ್ನು ಮೀರಿದ ನಿಂದನೆ ಮತ್ತು ಹಲ್ಲೆಯಿಂದ ಬಳಲುತ್ತಿದ್ದೇನೆ. 2021ರಲ್ಲಿ ಮದುವೆಯಾದಾಗಿನಿಂದ ಬಲೆ ಸಿಲುಕಿದ ಮೀನಿನಂತಾಗಿದೆ ನನ್ನ ಪರಿಸ್ಥಿತಿ ಎಂದಿರುವ ಸಂತ್ರಸ್ತೆ ಈ ಸಂಕಷ್ಟದ ಸ್ಥಿತಿಯಿಂದ ಪಾರಾಗಲು ಪೊಲೀಸರ ಸಹಾಯವನ್ನು ಕೋರಿದ್ದಾಳೆ.