Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

State News

ಕೆಎಸ್‌ಆರ್‌ಟಿಸಿ ನಿಂದ ಸರಕು ಸಾಗಾಣಿಕೆ ಸೇವೆ ಡಿ‌.15ಕ್ಕೆ ಚಾಲನೆ

ಕೆಎಸ್‌ಆರ್‌ಟಿಸಿ ನಿಂದ ಸರಕು ಸಾಗಾಣಿಕೆ ಸೇವೆ ಡಿ‌.15ಕ್ಕೆ ಚಾಲನೆ

ಬೆಂಗಳೂರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮೊದಲ ಬಾರಿಗೆ ಲಾಜಿಸ್ಟಿಕ್ಸ್ ಸೇವೆಯನ್ನು ಆರಂಭಿಸುತ್ತಿದೆ. ಇದಕ್ಕಾಗಿಯೇ ವಿಶೇಷ ಲಾರಿಗಳನ್ನು ವಿನ್ಯಾಸಗೊಳಿಸಲಾಗಿದೆ. ಡಿಸೆಂಬರ್ 15ರಂದು ಈ ಲಾರಿಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗುತ್ತದೆ.

ಕೆಎಸ್‌ಆರ್‌ಟಿಸಿ ನಮ್ಮ ಕಾರ್ಗೋ ನಿಮ್ಮ ವಿಶ್ವಾಸ, ನಮ್ಮ ಕಾಳಜಿ’ ಹೆಸರಿನ ಸರಕು ಸಾಗಣೆ ಸೇವೆಗಾಗಿಯೇ ಲಾರಿಗಳನ್ನು ವಿನ್ಯಾಸಗೊಳಿಸಲಾಗಿದೆ. ಸರಕು ಸಾಗಣೆ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ನಿಗಮ ಸಜ್ಜಾಗಿದೆ.

ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ತನ್ನ ಸೇವೆಗಳ ಮೂಲಕ ಜನಪ್ರಿಯವಾಗಿರುವ ಕೆಎಸ್‌ಆರ್‌ಟಿಸಿ ಈಗ ಸರಕು-ಸಾಗಣೆ ಕ್ಷೇತ್ರಕ್ಕೆ ಕಾಲಿಡಲಿದೆ. ಡಿಸೆಂಬರ್ 15ರಂದು ಡಿಸೆಂಬರ್ 15ರಂದು ಲಾಜಿಸ್ಟಿಕ್ ಸೇವೆ ನೀಡುವ ಕೆಎಸ್‌ಆರ್‌ಟಿಸಿ ಲಾರಿಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ.

ಪ್ರಾಯೋಗಿಕ ಯೋಜನೆ; ಕೆಎಸ್‌ಆರ್‌ಟಿಸಿ ನಮ್ಮ ಕಾರ್ಗೋ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಸರಕು ಸಾಗಣೆಗಾಗಿಯೇ ಹೆಚ್ಚಿನ ಲಾರಿಗಳನ್ನು ಖರೀದಿ ಮಾಡಲು ಯೋಜಿಸಲಾಗಿದೆ. ಲಾಜಿಸ್ಟಿಕ್ ಸೇವೆ ಮೂಲಕ ಸುಮಾರು 100 ಕೋಟಿ ಆದಾಯ ಸಂಗ್ರಹ ಮಾಡಬಹುದು ಎಂದು ಕೆಎಸ್‌ಆರ್‌ಟಿಸಿ ನಿರೀಕ್ಷೆ ಮಾಡಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳ ನಿರವಹಣೆ ಮಾಡುವ ಮಾದರಿಯಲ್ಲಿಯೇ ಸರಕು ಸಾಗಿಸುವ ಲಾರಿಗಳನ್ನು ನಿರ್ವಹಿಸಲು ಯೋಜನೆ ರೂಪಿಸಿದೆ. ಸುಮಾರು 17.03 ಲಕ್ಷ ರೂ. ದರದಲ್ಲಿ 3.4 ಕೋಟಿ ರುಪಾಯಿ ವೆಚ್ಚದಲ್ಲಿ 20 ಲಾರಿಗಳನ್ನು ಖರೀದಿ ಮಾಡಲಾಗಿದ್ದು, ವಿನ್ಯಾಸವೂ ಸಹ ಪೂರ್ಣಗೊಂಡಿದೆ.

ಸರಕು ಸಾಗಣೆ ಮಾಡಲು ವಿಶಿಷ್ಟ ವಿನ್ಯಾಸದ ಲಾರಿಗಳನ್ನು ಪುಣೆಯಲ್ಲಿ ಸಿದ್ಧಪಡಿಸಲಾಗಿದೆ. ಕೆಲವೇ ದಿನಗಳಲ್ಲಿ ಎಲ್ಲಾ ಲಾರಿಗಳು ರಾಜ್ಯಕ್ಕೆ ಆಗಮಿಸಲಿವೆ. ಈ ಸೇವೆಗೆ ಜನರಿಂದಲೇ ಹೆಸರನ್ನು ಕೆಎಸ್‌ಆರ್‌ಟಿಸಿ ಆಹ್ವಾನಿಸಿತ್ತು. ಈಗ ಬಸ್‌ನಲ್ಲಿ ಸಾಗಣೆ ಮಾಡುವ ಸರಕುಗಳನ್ನು ಇನ್ನು ಮುಂದೆ ಲಾರಿಗಳಲ್ಲಿ ಸಾಗಣೆ ಮಾಡಲಾಗುತ್ತದೆ.

ನಿಗಮದ ಆದಾಯ ಹೆಚ್ಚಳ ಮಾಡುವ ಉದ್ದೇಶದಿಂದ ಜಾರಿಗೊಳಿಸುತ್ತಿರುವ ಯೋಜನೆಯಿಂದ 100 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಸದ್ಯ ರಾಜ್ಯದಲ್ಲಿ ಮಾತ್ರ ಈ ಲಾರಿಗಳು ಸಂಚಾರ ನಡೆಸಿ, ಸರಕು ಸಾಗಣೆ ಮಾಡಲಿವೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಹೊರ ರಾಜ್ಯಗಳಿಗೆ ಸಹ ಲಾರಿ ಮೂಲಕ ಸಾಗಾಟ ಆರಂಭಿಸಲು ಉದ್ದೇಶಿಸಲಾಗಿದೆ.

ಕೆಎಸ್‌ಆರ್‌ಟಿಸಿ ಆದಾಯ ಸಂಗ್ರಹಣೆ ಮಾಡಲು ಸರಕು ಸಾಗಣೆ ಯೋಜನೆ ರೂಪಿಸಿದೆ. ಅದರಲ್ಲೂ ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಜಾರಿಯಾದ ಬಳಿಕ ನಿಗಮಕ್ಕೆ ಆದಾಯದ ಕೊರತೆ ಉಂಟಾಗಿದೆ. ಆದ್ದರಿಂದ ಖಾಸಗಿಯವರು ನೀಡುತ್ತಿದ್ದ ಕಾರ್ಗೋ ಸೇವೆಗೆ ಕೆಎಸ್‌ಆರ್‌ಟಿಸಿ ಪಾದಾರ್ಪಣೆ ಮಾಡುತ್ತಿದೆ.

ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಬಿಎಂಟಿಸಿ ಸಾರಿಗೆ ಸೇವೆಗಳಿವೆ. ಆದರೆ ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳಲ್ಲಿ ಕಾರ್ಗೋ ಸೇವೆ ಲಭ್ಯವಿರಲಿದೆ. ಆರಂಭದಲ್ಲಿ 109 ಕೇಂದ್ರಗಳಲ್ಲಿ ಕಾರ್ಗೋ ಸೇವೆ ಆರಂಭಿಸಲಾಗುತ್ತದೆ.

ಕಾರ್ಗೋ ಸೇವೆ ಪಡೆಯಲು ಗ್ರಾಹಕರು ಬಸ್ ನಿಲ್ದಾಣದ ಕೌಂಟರ್‌ನಲ್ಲಿ ಅರ್ಜಿ ಪಡೆದು ವಿವರ ದಾಖಲಿಸಬೇಕು. ಬಳಿಕ ಪಾರ್ಸೆಲ್ ಅನ್ನು ಸಿಬ್ಬಂದಿಗೆ ನೀಡಿ, ನಿಗದಿತ ಶುಲ್ಕವನ್ನು ಪಾವತಿ ಮಾಡಿ ರಶೀದಿ ಪಡೆಯಬೇಕು.

ಪಾರ್ಸೆಲ್ ಸೇವೆಗಾಗಿಯೇ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಲಾಗಿದೆ. ಪಾರ್ಸೆಲ್ ಪಡೆದವರು ತಮ್ಮ ಸಹಿಯ ಜೊತೆ ವಿವರಗಳನ್ನು ಸಾಫ್ಟ್‌ವೇರ್‌ನಲ್ಲಿ ದಾಖಲು ಮಾಡುತ್ತಾರೆ. ಪಾರ್ಸೆಲ್ ಹೊರಟ ತಕ್ಷಣ, ಅದು ತಲುಪಿದ ತಕ್ಷಣದ ಗ್ರಾಹಕರಿಗೆ ಎಸ್‌ಎಂಎಸ್ ಬರುವಂತೆ ವ್ಯವಸ್ಥೆ ಮಾಡಲಾಗಿದೆ.

ಖಾಸಗಿ ಕಾರ್ಗೋ ಸೇವೆಗಳು ಸಾಕಷ್ಟು ಜನಪ್ರಿಯವಾಗಿವೆ. ಕೆಎಸ್‌ಆರ್‌ಟಿಸಿ ಮೊದಲ ಬಾರಿಗೆ ಕಾರ್ಗೋ ಸೇವೆ ಆರಂಭಿಸುತ್ತಿದೆ. ಜನರು ಈ ಸೇವೆಗೆ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ? ಎಂದು ಕಾದು ನೋಡಬೇಕಿದೆ.

Megha News