ಬೆಂಗಳೂರು: ಡಿ.16ರಿಂದ ಆರಂಭಗೊಳ್ಳಬೇ ಕಿದ್ದಂತ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆ, ಈಗ ಡಿ.26ಕ್ಕೆ ಮುಂದೂಡಿಕೆಯಾಗಿದೆ. ಡಿ.26ರಿಂದ ಯುವನಿಧಿ ಯೋಜನೆಗೆ ನೋಂದಣಿ ಆರಂಭಗೊಳ್ಳಲಿದೆ ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ಮಾಡಿರುವಂತ ಅವರು 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದು ಆರು ತಿಂಗಳು ಪೂರೈಸಿದವರು ಮತ್ತು ಉನ್ನತ ಶಿಕ್ಷಣ ಅಥವಾ ಯಾವುದೇ ಉದ್ಯೋಗಕ್ಕೆ ಸೇರದೇ ಇರುವವರು ಅರ್ಜಿ ಸಲ್ಲಿಸಲು ಅರ್ಹರು ಎಂದಿದ್ದಾರೆ.
ಪದವಿ ಹೊಂದಿರುವವರಿಗೆ ಮತ್ತು ಡಿಪ್ಲೊಮಾ ತೇರ್ಗಡೆ ಆದವರಿಗೆ ಈ ಯೋಜನೆ ಅನ್ವಯಿಸಲಿದೆ. ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ರೂ., ಡಿಪ್ಲೊಮಾ ಹೊಂದಿರುವವರಿಗೆ 1,500 ಆರ್ಥಿಕ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಉದ್ಯೋಗ ಸಿಗುವವರೆಗೆ ಅಥವಾ ಎರಡು ವರ್ಷ ಅವಧಿಯಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಈ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಡಿಪ್ಲೋಮಾ, ಪದವೀಧರರಿಗೆ ಗುಡ್ ನ್ಯೂಸ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ್ದಾರೆ.