ಕೊಲ್ಹಾರ : ನಾಡಿಗೆ ಕೋಲಾರ ಚಿನ್ನ ನೀಡಿದರೆ ಬಸವನಾಡಿನ ಕೊಲ್ಹಾರ ಮೊಸರು-ಅನ್ನ ಹಂಚುವ ಮೂಲಕ ನಾಡಿಗೆ ಅನುಪಮ ಕೊಡುಗೆ ನೀಡಿದೆ ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಬಣ್ಣಿಸಿದರು.
ಕೊಲ್ಹಾರ ಪಟ್ಟಣದ ಹಿರೇಮಠದಲ್ಲಿ ಪಟ್ಟದ ದೇವರ ಕಾರ್ಯಕ್ರಮದಲ್ಲಿ ಜರುಗಿದ ಸದ್ಧರ್ಮ ಸಮಾರಂಭದಲ್ಲಿ ಜಗದ್ಗುರುಗಳಿಂದ ಸನ್ಮಾನಗೊಂಡು ಮಾತನಾಡಿದ ಸಚಿವರು, ರಾಜ್ಯದಲ್ಲಿ ಸರ್ಕಾರಗಳು ಮಾಡದ ಶೈಕ್ಷಣಿಕ ಕ್ರಾಂತಿಯನ್ನು ಮಾಡುವಲ್ಲಿ ವೀರಶೈವ ಲಿಂಗಾಯತ ಮಠಾಧೀಶರ ಪಾತ್ರ ದೊಡ್ಡದಿದೆ. ಬೀದರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯ ವರೆಗೆ ಅನ್ನ ದಾಸೋಹ ಸಹಿತ ಜ್ಞಾನ ದಾಸೋಹದ ಮೂಲಕ ಕನ್ನಡ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವಲ್ಲಿ ವೀರಶೈವ ಲಿಂಗಾಯತ ಮಠಗಳು, ಮಠಾಧೀಶರ ಕೊಡುಗೆ ಅನುಪಮವಾಗಿದೆ ಎಂದು ವಿವರಿಸಿದರು.
ಅದರಲ್ಲೂ ಜಾತಿ ಮತ ಪಂಥ ಎಣಿಸದೇ ಸಿದ್ಧಗಂಗಾ ಮಠಾಧೀಶರಾಗಿದ್ದ ಡಾ.ಶಿವಕುಮಾರ ಶ್ರೀಗಳು ಹಾಗೂ ವಿಜಯಪುರ ಜಿಲ್ಲೆಯಲ್ಲಿ ಬಂಥನಾಳ ಸಂಗನಬಸವ ಶ್ರೀಗಳ ಕೊಡುಗೆ ಅನುಪಮ ಹಾಗೂ ಮೇರು ಪರ್ವತದಂತೆ ಸದಾ ಉನ್ನತ ಸ್ಥಾನದಲ್ಲಿ ಮೇಲ್ಪಂಕ್ತಿಯಂತಿದೆ ಎಂದು ಬಣ್ಣಿಸಿದರು.
ಹಳೆಯ ಕೊಲ್ಹಾರ ಪಟ್ಟಣ ಕೃಷ್ಣಾ ನದಿಗೆ ಆಲಮಟ್ಟಿ ಬಳಿ ನಿರ್ಮಿಸಿದ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರದ ಹಿನ್ನೀರಿನಲ್ಲಿ ಮುಳುಗಡೆಯಾಗಿ ಪುನರ್ವಸತಿಗಾಗಿ ಹೊಸ ಕೊಲ್ಹಾರ ಪಟ್ಟಣ ಮರು ಸೃಷ್ಡಿಗೊಂಡಿಗೆ. ಸಂತ್ರಸ್ತ ಜನರು ನೆಮ್ಮದಿಯ ಜೀವನ ನಡೆಸುಂತಾಗಲು ವೀರಶೈವ ಪಂಚಪೀಠಗಳ ಜಗದ್ಗುರುಗಳ ಹಾಗೂ ಬಸವಾದಿ ಶರಣರ ಕಾರುಣ್ಯವೂ ಕಾರಣವಾಗಿದೆ. ಈ ಕಾರಣಕ್ಕೆ ಇದೀಗ ತಾವು ಒಂದೇ ವೇದಿಕೆಯಲ್ಲಿ ನಾಲ್ವರು ಜಗದ್ಗುರುಗಳನ್ನು ಆಹ್ವಾನಿಸಿದ್ದು, ಭವಿಷ್ಯದ ದಿನಗಳಲ್ಲಿ ಪಂಚಪೀಠಗಳ ಐದೂ ಜಗದ್ಗುರುಗಳನ್ನು ಕರೆಸುವ ಶಕ್ತಿ ಕೊಲ್ಹಾರದ ಜನರಿಗೆ ಶಕ್ತಿ ದೊರೆಯಲಿ. ಧರ್ಮ ಸಂರಕ್ಷಣಾ, ಸಾಮಾಜಿಕ ಸಾಮರಸ್ಯದ ನೆಮ್ಮದಿಯ ನೆಲೆಯಾಗಲಿ ಎಂದು ಆಶಿಸಿದರು.
ಬಸವಾದಿ ಶರಣರ ಸಾರಿದ ಜಾತಿ, ಮತ ರಹಿತ ಸಮ ಸಮಾಜ ನಿರ್ಮಾಣದ ಅಗತ್ಯ ಇದೀಗ ತುರ್ತಾಗಿ ಆಗಬೇಕಿದೆ. ಶ್ರೇಷ್ಠ ವಚನಕಾರ್ತಿ ಅಕ್ಕಮಹಾದೇವಿ ಅವರ ಸಮಾಜದ ಕಣ್ತೆರೆಸುವ ದಾರ್ಶನಿಕರು ನೀಡಿದ ಸಂದೇಶ ಬಿತ್ತುವ ಕೆಲಸವಾಗಬೇಕಿದೆ ಎಂದರು.
ಶರಣರು ಕಂಡ ಜಾತ್ಯಾತೀತ ಸಮಾಜ ನಿರ್ಮಾಣದ ಹೆಜ್ಜೆಯಾಗಿ ಕೊಲ್ಹಾರ ಪಟ್ಟಣದಲ್ಲಿ ಜಾತಿ, ಮತ, ವರ್ಗ ಹಾಗೂ ರಾಜಕೀಯ ರಹಿತವಾಗಿ ರೂಪಿಸಿರುವ ಈ ಧಾರ್ಮಿಕ ಕಾರ್ಯಕ್ರಮ ಅನುಕರಣೀಯ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಉಜ್ಜಯಿನಿ ಪೀಠದ ಜಗದ್ಗುರು ಡಾ.ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಜಗದ್ಗುರರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದರು, ಹಿರಿಯ ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ
ಭಗವತ್ಪಾದರು ಹಾಗೂ ಕಿರಿಯ ಕಾಶಿ ಪೀಠದ ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು. ಹಿರೇಮಠದ ಪಟ್ಟದೇವರು ಪ್ರಭುಕುಮಾರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಕೊಡೆಕಲ್ ವಿರಕ್ತ ಮಠದ ಶಿವಕುಮಾರ ಶ್ರೀಗಳು, ಮನಗೂಳಿ ಹಿರೇಮಠದ ಸಂಗನಬಸವ ಶ್ರೀಗಳು, ಯರನಾಳ ಸಂಗನಬಸವ ಶ್ರೀಗಳು, ಮಸೂತಿಯ ಪ್ರಭುಕುಮಾರ ಶಿವಾಚಾರ್ಯರು, ಪಟ್ಟದೇವರು ಹಿರೇಮಠದ ಮುರುಘೇಂದ್ರ ಶ್ರಿಗಳು, ಅತಿಥಿಗಳಾಗಿ ಸೋಮನಗೌಡ ಪಾಟೀಲ, ಕಲ್ಲು ದೇಸಾಯಿ, ಸಿ.ಎಸ್.ಗಿಡ್ಡಪ್ಪಗೋಳ, ವಿನೀತ ದೇಸಾಯಿ, ಬಿ.ಯು. ಗಿಡ್ಡಪ್ಪಗೋಳ, ಶ್ರೀಶೈಲ ಪತಂಗಿ, ಆರ್.ಬಿ. ಪಕಾಲಿ, ಟಿ.ಟಿ. ಹಗೇದಾಳ, ರಾಚಯ್ಯ ಗಣಕುಮಾರ, ಶಶಿಧರ ದೇಸಾಯಿ, ಸಿ.ಎಂ. ಗಣಕುಮಾರ, ಶ್ರೀಶೈಲ ಮುಳವಾಡ, ನಿಂಗಪ್ಪ ಗಣಿ, ಬಾಬು ಭಜಂತ್ರಿ, ಅಪ್ಪಾಶಿ ಮಟ್ಯಾಳ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕವಿತಾ ಅಜಯ ಮುದಕವಿ ಹಾಗೂ ನವಲಿಂಗ ಪಾಟೀಲ ನಿರೂಪಿಸಿದರು.