ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ಗೆ ಹನ್ನೊಂದು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನ 7 ಅಭ್ಯರ್ಥಿಗಳಾದ ಯತೀಂದ್ರ ಸಿದ್ದರಾಮಯ್ಯ, ಸಚಿವ ಬೋಸರಾಜು, ಕೆ.ಗೋವಿಂದ ರಾಜು, ವಸಂತ ಕುಮಾರ್, ಮಾಜಿ ಎಂಎಲ್‌ಸಿ ಐವಾನ್ ಡಿಸೋಜಾ, ಶಿವಮೊಗ್ಗದ ಬಲ್ಕೀಸ್ ಬಾನು, ಜಗದೇವ್ ಗುತ್ತೇದಾರ್ ಅವಿರೋಧವಾಗಿ ಆಯ್ಕೆಯಾದವರು.
ಬಿಜೆಪಿಯ ಮೂವರು ಅಭ್ಯರ್ಥಿಗಳಾದ ಸಿ.ಟಿ.ರವಿ, ಎನ್.ರವಿಕುಮಾರ್ ಹಾಗೂ ಎಂ.ಜಿ.ಮುಳೆ ಹಾಗೂ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ಅವಿರೋಧವಾಗಿ ಆಯ್ಕೆಯಾದರು.
ವಿಧಾನಸಭೆಯಿಂದ ಪರಿಷತ್ಗೆ ನಡೆಯುವ ಚುನಾವಣೆಗೆ ಒಟ್ಟು 12 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನಿಂದ 7, ಬಿಜೆಪಿಯಿಂದ 3 ಹಾಗೂ ಜೆಡಿಎಸ್ನಿಂದ 1 ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನಿಂದ ಆಸಿಫ್ ಪಾಷಾ ಆರ್.ಎಂ. ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ವೇಳೆ ಸೂಚಕರಿಲ್ಲದ ಕಾರಣ ಇವರ ನಾಮಪತ್ರ ತಿರಸ್ಕೃತವಾಗಿತ್ತು. ಹೀಗಾಗಿ 11 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ಗಡುವಾಗಿದ್ದು, ಯಾರೂ ನಾಮಪತ್ರವನ್ನು ಹಿಂಪಡೆದಿಲ್ಲ. ಭರ್ತಿ ಮಾಡಬೇಕಿದ್ದ ಹನ್ನೊಂದು ಸ್ಥಾನಗಳಿಗೆ ಹನ್ನೊಂದು ಅಭ್ಯರ್ಥಿಗಳು ಮಾತ್ರ ಅಂತಿಮ ಕಣದಲ್ಲಿದ್ದರು.