ರಾಯಚೂರು: ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವರ್ತಕರ, ತರಕಾರಿ ಮಾರಾಟಗಾರರ ಹಾಗೂ ರೈತರ ಸಭೆಯನ್ನು ನಡೆಸಲಾಗಿದ್ದು, ಸಭೆಗೆ ರೈತರಿಗೂ ಆಹ್ವಾನ ನೀಡಲಾಗಿದ್ದು, ರೈತರ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಮತ್ತು ರೈತರಿಗೆ ಸಿಗಬೇಕಾದ ಹಲವು ಸೌಲಭ್ಯಗಳನ್ನು ನೀಡಲು ಚರ್ಚಿಸಲಾಗಿದ್ದು, ಅಭಿವೃದ್ಧಿಪರ ಕಾರ್ಯ ನಿರ್ವಹಿಸುವ ಎಪಿಎಂಸಿ ಆಡಳಿತದ ಕುರಿತು ಕೆಲವು ಸುಳ್ಳು ಹಾಗೂ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದು, ಸಾರ್ವಜನಿಕರು ಈ ಮಾಹಿತಿಗಳ ಬಗ್ಗೆ ಕಿವಿಗೊಡಬಾರದೆಂದು ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಅವರು ಸ್ಪಷ್ಟಪಡಿಸಿದ್ದಾರೆ.
ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಜು.31ರಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಅವರ ನೇತೃತ್ವದಲ್ಲಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳೊಂದಿಗೆ ರಾಯಚೂರು ಎ.ಪಿ.ಎಂ.ಸಿ ಯಿಂದ ಲೈಸನ್ಸ್ ಪಡೆದು ಕಾರ್ಯನಿರ್ವಹಿಸುತ್ತಿರುವ ವರ್ತಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪಟೇಲ್ ಗಂಜ್ ವರ್ತಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ತರಕಾರಿ ಹೋಲ್ ಸೇಲ್ ಮಾರಾಟಗಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ದಿ ಫ್ಯಾಕ್ಟರಿ ಅಸೋಸಿಯೆಶನ್ ರಾಯಚೂರು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಇವರೊಂದಿಗೆ ರೈತರು ಮಾರುಕಟ್ಟೆ ಪ್ರಾಂಗಣಕ್ಕೆ ತರುವ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಸ್ಪರ್ಧಾತ್ಮಕ ಬೆಲೆ ಸಿಗುವಂತೆ ಮಾಡುವುದು ಮತ್ತು ರೈತರಿಗೆ ಸಮಿತಿಯಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ಚರ್ಚಿಸಲಾಯಿತು.
ಈ ಸಭೆಯಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ, ಹತ್ತಿ ಮಾರುಕಟ್ಟೆ ಪ್ರಾಂಗಣದ ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ ನಿಯಂತ್ರಿತ ಕೃಷಿ ಹುಟ್ಟುವಳಿಗಳನ್ನು ಮಾರಾಟಕ್ಕಾಗಿ ತರುವ ರೈತರಿಗೆ ಈಗಾಗಲೇ ಪ್ರಾಂಗಣಗಳಲ್ಲಿ ಒದಗಿಸಿರುವ ಮೂಲಭೂತ ಸೌಕರ್ಯಗಳೊಂದಿಗೆ ರೈತರಿಗೆ ಪ್ರಾಂಗಣಗಳಲ್ಲಿ ಮುಖ್ಯವಾಗಿ ಬೆಳಕಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಬ್ಯಾಂಕ್ ಕಟ್ಟಡ, ಸಿಸಿ ರೋಡ್, ಶೌಚಾಲಯಗಳ ವ್ಯವಸ್ಥೆ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಮಳೆಗಾಲದಲ್ಲಿ ರೈತರ ಉತ್ಪನ್ನಗಳು ಹಾಳಾಗದಂತೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮತ್ತು ಶೆಡ್ಗಳ ದುರಸ್ತಿ ಮಾಡುವುದು, ಪ್ರಾಂಗಣಗಳ ಸ್ವಚ್ಛತೆ ಕಾಪಾಡುವುದು ಮತ್ತು ಪ್ರಾಂಗಣಕ್ಕೆ ಬರುವ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ವರ್ತಕರ ಗಮನಕ್ಕೆ ತರಲಾಯಿತು.
ಮಾರುಕಟ್ಟೆ ಕ್ಷೇತ್ರದಲ್ಲಿ ಬರುವ ಎಲ್ಲಾ ರೈತರಿಗೆ ಮೂಲಭೂತ ಸೌಲಭ್ಯಗಳನ್ನು ಮಾಡಿಕೊಡುವುದು ಎ.ಪಿ.ಎಂ.ಸಿ.ಯ ಪ್ರಮುಖ ಉದ್ದೇಶವಾಗಿದ್ದು, ರೈತರಿಗೆ ಸಿಗಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದ್ದು, ಸರ್ಕಾರ ಮತ್ತು ಶಾಸಕರ ಏಳಿಗೆಯನ್ನು ಸಹಿಸದೇ ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಖಂಡನೀಯವಾಗಿರುತ್ತದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಅವರು ಸ್ಪಷ್ಟೀಕರಣ ನೀಡಿದ್ದಾರೆ.