Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ದೇಶದಲ್ಲಿ ಕಾರ್ಮಿಕ ವರ್ಗ ಸಂಪತ್ತನ್ನು ಉತ್ಪಾದಿಸಿದರೆ, ಉಳಿದವರು ಅನುಭವಿಸುತ್ತಾರೆ-ಮುಖ್ಯಮಂತ್ರಿ ಸಿದ್ದರಾಮಯ್ಯ

ದೇಶದಲ್ಲಿ ಕಾರ್ಮಿಕ ವರ್ಗ ಸಂಪತ್ತನ್ನು ಉತ್ಪಾದಿಸಿದರೆ, ಉಳಿದವರು ಅನುಭವಿಸುತ್ತಾರೆ-ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು. ದೇಶದಲ್ಲಿ ಕಾರ್ಮಿಕ ವರ್ಗ ಸಂಪತ್ತನ್ನು ಉತ್ಪಾದಿಸುತ್ತದೆ. ಉಳಿದವರು ಅನುಭವಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಕಾರ್ಮಿಕ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022-23 ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ಪಾಲ್ಗೊಳ್ಳಬೇಕು ಎನ್ನುವ ಉದ್ದೇಶದಿಂದಲೇ ಬಸವಣ್ಣನವರು ಕಾಯಕ ಪದ್ಧತಿಯನ್ನು ಹೇಳಿದರು.
ಸಂವಿಧಾನದ ಪ್ರಕಾರ ಪ್ರತಿಯೊಬ್ಬರೂ ಸಮಾಜದ ಸಂಪತ್ತಿನಲ್ಲಿ ಸಮಪಾಲು ಹೊಂದಬೇಕು. ಹೀಗಾಗಿ ನಾವು ಕಾರ್ಮಿಕರ ಮಕ್ಕಳಿಗೆ ಈ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇದರಿಂದ ಸಮ ಸಮಾಜದ ಆಶಯಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಶೂದ್ರ ಮತ್ತು ಮಹಿಳೆಯರನ್ನು ಶತ- ಶತಮಾನಗಳ ಕಾಲ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗಿತ್ತು. ಈ ಕಾರಣಕ್ಕೇ ಶೂದ್ರ ವರ್ಗಗಳು ಹಿಂದುಳಿಯುವಂತಾಯಿತು. ಅಸಮಾನತೆ ಹೆಚ್ಚಾಯಿತು. ಈ ಅಸಮಾನತೆಯನ್ನು ಅಳಿಸುವ ಉದ್ದೇಶ ನಮ್ಮ ಸರ್ಕಾರದ್ದು ಎಂದರು.
960000 ಮಕ್ಕಳಿಗೆ ಕಲ್ಯಾಣ ನಿಧಿ ಮೂಲಕ ಸಹಾಯಧನ ಬಿಡುಗಡೆ ಆಗುತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ಶಿಕ್ಷಣವಂತರಾಗಬೇಕು. ಶಿಕ್ಷಣದಿಂದ ಅಸಮಾನತೆ ದೂರ ಮಾಡಬಹುದು ಎಂದರು.
ಸಹಾಯ ಧನ ಪಡೆಯುತ್ತಿರುವ ಇವರೆಲ್ಲರೂ ಅಸಂಘಟಿತ ಕಾರ್ಮಿಕರ ಮಕ್ಕಳು. ಶೇ 83 ರಷ್ಟು ಕಾರ್ಮಿಕರು ಇವತ್ತಿಗೂ ಅಸಂಘಟಿತರಾಗಿದ್ದಾರೆ. ದೇಶದಲ್ಲಿ ರೈತ ಸಮುದಾಯವನ್ನು ಬಿಟ್ಟರೆ ಎರಡನೇ ಅತೀ ದೊಡ್ಡ ಸಮುದಾಯ ಕಾರ್ಮಿಕ ಸಮುದಾಯ ಆಗಿದೆ ಎಂದರು.
ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪಟ್ಟಭದ್ರರನ್ನು ನಾವು ದೂರ ಇಡಬೇಕು. ಈ ಪಟ್ಟ ಭದ್ರರು ಸಾಮಾಜಿಕ ನ್ಯಾಯದ ವಿರೋಧಿಗಳು. ಈ ವಿಭಜಕರು ಶೂದ್ರ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲೆ ಬರುವುದನ್ನು ವಿರೋಧಿಸುತ್ತಾರೆ. ಆದ್ದರಿಂದ ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವವರನ್ನು ನಾವು ವಿರೋಧಿಸಬೇಕು ಎಂದರು.
ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯಿಂದ ನಾವು ಎಲ್ಲಾ ಜಾತಿ-ಧರ್ಮದವರಿಗೆ ಅನುಕೂಲ ಆಗುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಕಾರ್ಮಿಕ ಸಚಿವರಾದ ಸಂತೋಷ್ ಲಾಡ್, ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಆಹಾರ ಸಚಿವರಾದ ಕೆ.ಹೆಚ್.ಮುನಿಯಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರುಗಳು ಉಪಸ್ಥಿತರಿದ್ದರು.

Megha News