ರಾಯಚೂರು. ಬೆಳಕಿನ ಹಬ್ಬ ದೀಪಾವಳಿಯ ಅದ್ಧೂರಿ ಆಚರಣೆಗೆ ಕ್ಷಣಗಣನೆ ಆರಂಭವಾ ಗಿದ್ದು, ಜನರು ಬಟ್ಟೆ, ಆಕಾಶಬುಟ್ಟಿ, ಹಣತೆ, ಚಿನ್ನಾಭರಣಗಳು, ವಾಹನಗಳು, ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಮುಗಿ ಬಿದ್ದರು. ಬರಗಾಲದ ನಡುವೆಯೂ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಕಂಡುಬಂದಿದ್ದು, ವ್ಯಾಪಾರವೂ ಕಳೆಗಟ್ಟಿದೆ.
ದೀಪಾವಳಿ ಹಬ್ಬದ ಭಾಗವಾದ ನರಕ ಚತುರ್ದಶಿಯನ್ನು ಆಚರಿಸಲು, ಲಕ್ಷ್ಮಿ ಪೂಜೆ ಮಾಡಲು ತಯಾರಿಗಳು ಕಳೆದ ಎರಡ್ಮೂರು ದಿನಗಳಿಂದ ನಡೆಯುತ್ತಿದೆ. ಬಟ್ಟೆ, ಹಣತೆಗಳು, ಆಕಾಶ ಬುಟ್ಟಿಗಳು, ಕಬ್ಬು, ಬಾಳೆ ದಿಂಡು, ಹೂ ಬಿಟ್ಟ ಸಸಿಗಳು, ಹಣ್ಣುಗಳನ್ನು ಜನರು ಖರೀದಿಸಿದರು. ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ನಗರದ ಸೂಪರ್ ಮಾರ್ಕೆಟ್ ಮಧ್ಯಾಹ್ನದ ಹೊತ್ತಿನಲ್ಲಿ ಗ್ರಾಹಕರ ದಟ್ಟಣೆಯಿಂದ ಗಿಜಿಗುಡುತ್ತಿದೆ.
ಗ್ರಾಹಕರನ್ನು ಸೆಳೆಯಲು ಮತ್ತು ಹಬ್ಬದ ಸಡಗರ ಹೆಚ್ಚಿಸಲು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಸೂಪರ್ ಮಾರ್ಕೆಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿನ ಮಳಿಗೆಗಳು, ಹೋಟೆಲ್, ಬಟ್ಟೆ ಅಂಗಡಿ, ಶಾಪಿಂಗ್ ಮಾಲ್‌ಗಳ ಹೊರ ಭಾಗದಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ವ್ಯಾಪಾರ ವಹಿವಾಟಿನಲ್ಲಿ ತೊಡಗಿದವರಿಗೆ ದೀಪಾವಳಿ ಎಂದರೆ ಹೊಸ ಆರ್ಥಿಕ ವರ್ಷ ಆರಂಭವಾದಂತೆ. ಹೀಗಾಗಿ, ಹಬ್ಬದ ಹಿಂದಿನ ದಿನವೇ ಅಂಗಡಿಗಳನ್ನು ಸ್ವಚ್ಛಗೊಳಿಸಿ ಲಕ್ಷ್ಮಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಯಿತು. ಗೋಡೆಗೆ ಸುಣ್ಣ ಬಣ್ಣ ಬಳಿದು ತಳಿರು ತೋರಣಗಳಿಂದ ಮಳಿಗೆಯನ್ನು ಸಿಂಗರಿಸುವ ಕಾರ್ಯದಲ್ಲಿ ಕುಟುಂಬ ಸದಸ್ಯರು ತೊಡಗಿಸಿಕೊಂಡರು.