ಮೈಸೂರು. ಮೋದಿಗೆ ನನ್ನ ಕಂಡರೆ ಭಯ. ಹೀಗಾಗಿಯೇ ಪಂಚ ರಾಜ್ಯ ಚುನಾವಣೆಯಲ್ಲಿ ನಮ್ಮ ಬಗ್ಗೆ ಮಾತನಾಡುತ್ತಾರೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಯ ಸಿಗಲಿದೆ ಎಂದು ಸಿಎಂ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಗ್ಯಾರೆಂಟಿಗಳ ಟೀಕಿಸಿದ ಮೋದಿ ಈಗ ಅದೇ ಗ್ಯಾರಂಟಿಗಳನ್ನೇ ಬೇರೆ ಕಡೆ ಘೋಷಣೆ ಮಾಡುತ್ತಿರುವ ಅರ್ಥ ಏನು? ರಾಜ್ಯದಲ್ಲಿ 40% ಸರ್ಕಾರ ಎಂದು ಕರೆಯುತ್ತಿದ್ದುದ್ದು ಯಾರನ್ನ? ನಮ್ಮನ್ನೇನು ಆ ರೀತಿ ಕರೆಯುತ್ತಿಲ್ಲ. ಈ ಸತ್ಯ ಗೊತ್ತಿದ್ದರು ಸುಮ್ಮನೆ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಟಾಂಗ್ ನೀಡಿದರು.
ಪಂಚರಾಜ್ಯ ಚುನಾವಣೆ ಇಂದು ಮತದಾನ ನಡೆಯುತ್ತಿದೆ. ತೆಲಂಗಾಣ, ಮಧ್ಯಪ್ರದೇಶ್, ಛತ್ತೀಸ್ಗಡ, ರಾಜ್ಯಸ್ಥಾನ ಎಲ್ಲ ಕಡೆ ಕಾಂಗ್ರೆಸ್ ಗೆಲ್ಲುತ್ತೆ. ಈ ಚುನಾವಣೆಯ ಫಲಿತಾಂಶ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲ. ಈಗ ನವೆಂಬರ್ ನಲ್ಲಿ ಇದ್ದೇವೆ. ಲೋಕಸಭೆ ಚುನಾವಣೆಗೆ ಮಾರ್ಚ್ ಕೊನೆಯಲ್ಲಿ ನೋಟಿಫಿಕೇಷನ್ ಆಗಲಿದೆ ಎಂದರು.
ರಾಮಮಂದಿರ ಹೊಸ ವಿಚಾರ ಅಲ್ಲ. ರಾಮಮಂದಿರಕ್ಕೆ ನಮ್ಮ ವಿರೋಧ ಇಲ್ಲ. ಸುಪ್ರೀಂಕೋರ್ಟ್ನಲ್ಲಿ ತೀರ್ಮಾನ ಆಗಿದೆ. ಅದರಂತೆ ದೇವಾಲಯ ನಿರ್ಮಾಣ ಆಗುತ್ತಿದೆ. ರಾಮಮಂದಿರದಿಂದ ಮತದಾರರು ಬದಲಾವಣೆ ಆಗುತ್ತಾರೆ ಅನ್ನೋದು ತಪ್ಪು. ದೇಶದ ಜನ ವಿವಿಧತೆಯಲ್ಲಿ ಏಕತೆ ಬಯಸುತ್ತಾರೆ. ಬ್ರಿಟೀಷರು, ಮೊಘಲರ ದಾಳಿಯ ನಂತರವೂ ದೇಶ ಒಂದಾಗಿದೆ. ಬೇರೆ ಬೇರೆ ದೇಶ, ಭಾಷೆ ಇದ್ದರೂ ಒಗ್ಗಟ್ಟು ಇದೆ. ನಾವು ಒಳಗೊಳ್ಳುವಿಕೆಯಲ್ಲಿ ನಂಬಿಕೆ ಇಟ್ಟುಕೊಂಡವರು ಎಂದು ಸಿಎಂ ಸಿದ್ದರಾಮಯ್ಯ ನುಡಿದರು.