ಬೆಂಗಳೂರು: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಐಸಿಸ್ ಜೊತೆ ಸಂಪರ್ಕ ಹೊಂದಿರುವ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಿರುಗೇಟು ನೀಡಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಐಸಿಸ್ ಜೊತೆ ನಂಟು ಹೊಂದಿರುವ ಆರೋಪ ಹೊತ್ತಿರುವ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಮುಹಮ್ಮದ್ ತನ್ವೀರ್ ಹಶ್ಮಿ ಜೊತೆ ಪ್ರಧಾನಿ ನರೇಂದ್ರ ಮೋದಿ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಯತ್ನಾಳ್ ಅವರು, ತನ್ವೀರ್ ಹಶ್ಮಿ ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾರೆ. ಈ ಸತ್ಯ ತಿಳಿದಿದ್ದರೂ ಹುಬ್ಬಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದು ಸರಣಿ ‘ಎಕ್ಸ’ (ಹಿಂದಿನ ಟ್ವೀಟ್) ಮಾಡುವ ಮೂಲಕ ಮೋದಿ ವಿರುದ್ಧ ಯತ್ನಾಳ್ ಷಡ್ಯಂತ್ರ ನಡೆಸಿದ್ದಾರೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಯತ್ನಾಳ್ ಅವರ ಆರೋಪವನ್ನು ತಳ್ಳಿ ಹಾಕಿದ್ದಾರೆ. ಯತ್ನಾಳ್ ಅವರಿಗೆ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನವನ್ನು ನಿರಾಕರಿಸಿದ ಕಾರಣ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಮುಜುಗರ ಉಂಟು ಮಾಡಲು ಸಂಚು ರೂಪಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಜೊತೆಗೆ ಯತ್ನಾಳ್ ಮಾಡಿದ ಆರೋಪವನ್ನು ಹಶ್ಮಿ ಕೂಡ ತಳ್ಳಿ ಹಾಕಿದ್ದಾರೆ. ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲಿ ಇಲ್ಲವಾದಲ್ಲಿ ಯತ್ನಾಳ್ ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಯತ್ನಾಳ್‌ಗೆ ಹಶ್ಮಿ ಸವಾಲು ಹಾಕಿದ್ದಾರೆ.
ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಹಶ್ಮಿ ಜೊತೆಗಿನ ಪ್ರಧಾನಿ ಮೋದಿ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. “ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕಳೆದುಕೊಂಡ ನಂತರ ಕೋಪ ಮತ್ತು ಹತಾಶೆಗೊಂಡಿರುವ ಯತ್ನಾಳ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ಸೇಡು ತೀರಿಸಿಕೊಳ್ಳುವ ನಿಜವಾದ ಉದ್ದೇಶದಿಂದ ನನ್ನ ವಿರುದ್ಧ ಈ ಆರೋಪಗಳನ್ನು ಮಾಡಿದ್ದಾರೆ ಎಂದು ತೋರುತ್ತದೆ. ಈ ಆರೋಪದ ಬಳಿಕ, ಯತ್ನಾಳ್ ಅವರಿಗೆ ನಿಸ್ಸಂದೇಹವಾಗಿ ತಿಳಿದಿರುವ ಮೌಲ್ವಿಯೊಂದಿಗೆ ಪಿಎಂ ನರೇಂದ್ರ ಮೋದಿಯವರ ಸಂಪರ್ಕದ ವಿವರಗಳು ಸಹ ಬೆಳಕಿಗೆ ಬರುತ್ತವೆ. ಈ ಆರೋಪಗಳ ಸ್ವರೂಪವು ಪ್ರಧಾನಿ ಮತ್ತು ಇತರ ಬಿಜೆಪಿ ನಾಯಕರಿಗೆ ಮುಜುಗರ ಉಂಟುಮಾಡುವ ಪ್ರಯತ್ನವನ್ನು ಸೂಚಿಸುತ್ತದೆ’ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೌಲ್ವಿ ಹಾಶ್ಮಿ ಅವರ ಜೊತೆಗೆ ಇತರ ಬಿಜೆಪಿ ನಾಯಕರು ಮಾತ್ರವಲ್ಲ ಸಾಕ್ಷಾತ್ ನರೇಂದ್ರ ಮೋದಿ ಅವರೂ ಸಂಬಂಧ ಹೊಂದಿರುವುದು ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಪೋಟೊಗಳು ಸ್ಪಷ್ಟವಾಗಿ ಹೇಳುತ್ತಿವೆ. ದೀರ್ಘಕಾಲದಿಂದ ಹಾಶ್ಮಿ ಅವರಿಗೆ ಅತ್ಯಂತ ಆತ್ಮೀಯರಾಗಿರುವ ಮತ್ತು ಊರಿನಲ್ಲಿ ತನ್ನ ನೆರೆಹೊರೆಯಾಗಿರುವ ಯತ್ನಾಳ್ ಅವರಿಗೆ ಇದು ತಿಳಿದಿರಲಿಲ್ಲ ಎನ್ನುವುದನ್ನು ನಂಬಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.