ರಾಯಚೂರು: ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರ ಗುಳೆ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ ಮಾನವ ದಿನಗಳನ್ನು ಸೃಜನೆ ಮಾಡುವಲ್ಲಿ ರಾಯಚೂರು ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ರಾಯಚೂರು ಜಿಲ್ಲೆಗೆ 1 ಕೋಟಿ 10 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದೆ. ಪ್ರಸ್ತುತ ಏಪ್ರಿಲ್ ನಿಂದ ಜುಲೈವರೆಗೆ 1,07,63,026 ಮಾನವ ದಿನಗಳ ಸೃಜಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇನ್ನೂ ಬೆಳಗಾವಿ 1,06,11,453 (ದ್ವಿತೀಯ ಸ್ಥಾನ), ಕೊಪ್ಪಳ 86,02,434 (ತೃತೀಯ ಸ್ಥಾನ), ವಿಜಯನಗರ 70,32,260 (ನಾಲ್ಕನೇ ಸ್ಥಾನ), ಬಳ್ಳಾರಿ 60,19,848 (ಐದನೇ ಸ್ಥಾನ)ದಲ್ಲಿದೆ.
2023ರ ಏಪ್ರಿಲ್ 1ರಿಂದ ಕೇಂದ್ರ ಸರ್ಕಾರ ನರೇಗಾ ಕೂಲಿ ಮೊತ್ತವನ್ನು ₹309ರಿಂದ ₹316ಗೆ ಹೆಚ್ಚಳಮಾಡಿದೆ. ಬೆಳಗಾವಿ ಹಾಗೂ ಕಲಬುರಗಿ ವಿಭಾಗ ವ್ಯಾಪ್ತಿಯ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ನರೇಗಾ ಕೆಲಸದಲ್ಲಿ ಶೇಕಡ 30 ರಿಯಾಯತಿ ಸೌಲಭ್ಯವನ್ನು ರಾಜ್ಯ ಸರಕಾರ ನೀಡಿದೆ.
ಈ ಬಗ್ಗೆ ರಾಯಚೂರು ಜಿಲ್ಲೆಯ ಕೂಲಿಕಾರರಿಗೆ ಹೆಚ್ಚು ಮಾಹಿತಿ ನೀಡಿದ್ದರಿಂದ ಜನ ಗುಳೆ ಹೋಗುವುದನ್ನು ಬಿಟ್ಟು ನರೇಗಾದಡಿ ಇದ್ದೂರಲ್ಲೇ ಕೆಲಸ ಮಾಡಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಜಿಲ್ಲೆಯ 179 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿಕಾರರು ಕೆರೆ ಅಭಿವೃದ್ಧಿ, ಕೃಷಿ ಹೊಂಡ, ಬದು ನಿರ್ಮಾಣ ಮತ್ತು ನಾಲಾ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಶೇ.52.17: ರಾಯಚೂರು ಜಿಲ್ಲೆಯಾದ್ಯಂತ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೂಲಿ ಒದಗಿಸಲಾಗಿದೆ.
2022-23 ನೇ ಸಾಲಿನಲ್ಲಿ ಶೇಕಡ 51.22ರಷ್ಟು ಮಹಿಳೆಯರು ಭಾಗವಹಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಶೇ.52.81 ರಷ್ಟ್ಟು ಮಹಿಳೆಯರು ನರೇಗಾದಡಿ ಉದ್ಯೋಗ ಪಡೆದುಕೊಂಡಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದಾಗ ಕೇವಲ 3 ತಿಂಗಳಲ್ಲಿ ಶೇ.1 ರಷ್ಟು ಮಹಿಳೆಯರ ಪಾಲ್ಗೊಳ್ಳವಿಕೆ ಪ್ರಮಾಣದಲ್ಲಿ ಏರಿಕೆಯಾಗಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ಜನ ಕೆಲಸ ಹರಸಿ ಗುಳೆ ಹೋಗುತ್ತಿದ್ದರು. ಹೀಗಾಗಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿ ಅನುಷ್ಠಾನದಿಂದ ಜನರ ಗುಳೆಯೂ ತಪ್ಪಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಪಾಂಡ್ವೆ ಪ್ರತಿಕ್ರಿಯಿಸಿದ್ದಾರೆ.