ರಾಯಚೂರು. ನಗರಸಭೆಯ ಆದಾಯ ಮೂಲಗಳು ಮಧ್ಯೆದಲ್ಲಿಯೇ ಸೋರಿಕೆ ಯಾಗುತ್ತಿದ್ದರೂ ಮೇಲುಸ್ತುವಾರಿ ಮಾಡುವಲ್ಲಿ ನಗರಸಭೆ ಆಡಳಿತ ವೈಫಲ್ಯ ಮುಂದುವರೆದಿದೆ.
ಪ್ರತಿ ಶನಿವಾರದಂದು ನಡೆಯುವ ಕುರಿಗಳ ಸಂತೆಯಲ್ಲಿ ನಗರಸಭೆಯಿಂದ ಪ್ರತಿ ಕುರಿಗೆ ೫ ರೂ ಶುಲ್ಕ ವಸೂಲಿಗೆ ಟೆಂಡರ್ದಾರರಿಗೆ ದರ ನಿಗಧಿಪಡಿಸಲಾಗಿದೆ. ಆದರೆ ಗುತ್ತಿಗೆದಾರರು ಪ್ರತಿ ಕುರಿಗೆ ೧೦ ಶುಲ್ಕ ರೈತರಿಂದ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿಗಧಿಪಡಿಸಿ ದರಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿದ್ದರೂ ನಗರಸಭೆ ಮೌನ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಕುರಿ ಸಂತೆ ಮಾತ್ರವಲ್ಲ ನಗರದ ತರಕಾರಿ ಮಾರಾಟ ಸೇರಿದಂತೆ ನಿಗಧಿತ ದರಕ್ಕಿಂತ ಹೆಚ್ಚು ವಸೂಲಿ ಮಾಡಲಾಗುತ್ತಿದೆಯಾದರೂ ತಡೆಯುವ ಕ್ರಮಕ್ಕೆ ನಗರಸಭೆ ಏಕೆ ಮುಂದಾಗುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆ. ಪ್ರತಿ ವಾರದ ಸಂತೆ ಒಂದರಿAದಲೇ ಸಾವಿರಾರು ರೂ ಹಣ ಗುತ್ತಿಗೆದಾರರ ಪಾಲಾಗುತ್ತಿದೆ. ಇತ್ತ ನಗರಸಭೆಗೂ ಸೇರುತ್ತಿಲ್ಲ. ರೈತರಿಗೆ ಮಾತ್ರ ಅನವಶ್ಯಕ ಹೊರೆಯಾಗುತ್ತಿದೆ. ಜಾನುವಾರುಗಳ ಮಾರಾಟದಿಂದ ಶುಲ್ಕದಿಂದ ನಗರಸಭೆಗೆ ಲಕ್ಷಾಂತರ ಹಣ ಸಂಗ್ರಹವಾಗಬೇಕು. ಆದಾಯ ಹೆಚ್ಚಳವಾದರೆ ಮಾತ್ರ ಸಾರ್ವಜನಿಕರ ಮೂಲಭೂತ ಸೌಕರ್ಯ ಹೆಚ್ಚಿಸಲು ಸಾಧ್ಯವಾಗುತ್ತದೆ. ಆದಾಯ ಮೂಲಗಳನ್ನು ಸಂಗ್ರಹಿಸುವದು, ಅನ್ಯರ ಜೇಬಿಗೆಹೋಗುವದನ್ನು ತಡೆಬೇಕಾದ ಅಧಿಕಾರಿಗಳ ಒಳ ಒಪ್ಪಂದ, ರಾಜಕೀಯ ಪ್ರಭಾವದಿಂದ ಅಕ್ರಮ ಶುಲ್ಕ ವಸೂಲಿ ನಡೆಯುತ್ತಿದೆ ಎಂಬುದು ಆರೋಪವಾಗಿದೆ. ನಗರದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಶುಲ್ಕ ಸಂಗ್ರಹದ ಹಿಂದೆ ನಗರಸಭೆ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಟೆಂಡರ್ ಪಡೆದ ಗುತ್ತಿಗೆದಾರರು ವಸೂಲಿ ಮಾಡುತ್ತಿರುವ ಶುಲ್ಕದ ಪರಿಶೀಲನೆಗೂ ನಗರಸಭೆ ಮುಂದಾಗುತ್ತಿಲ್ಲ. ರೈತರು ತರಕಾರಿ, ಜಾನುವಾರುಗಳ ಮಾರಾಟಕ್ಕೆ ಹೆಚ್ಚುವರಿ ಶುಲ್ಕ ಪಾವತಿಸದೇ ಇದ್ದಲ್ಲಿ ಗುಂಡಾಗಿರಿ ಪ್ರದರ್ಶಿಸುವ ವ್ಯವಸ್ಥಿತ ಕೆಲಸ ನಡೆಸಲಾಗುತ್ತಿದೆ. ಈಗಲಾದರೂ ನಗರಸಭೆ ಅಧಿಕಾರಿಗಳು ಎಚ್ಚರಗೊಂಡು ಅನಧಿಕೃತ ಶುಲ್ಕ ವಸೂಲಿಗೆ ತಡೆಯೊಡ್ಡಬೇಕಿದೆ. ಆದಾಯ ಮೂಲಗಳು ಸೋರಿಕೆಯನ್ನು ತಡೆಯಬೇಕಿದೆ.