ರಾಯಚೂರು. ಜಿಲ್ಲೆಯ ಅಂಗನವಾಡಿಗಳಿಗೆ ರಾಜ್ಯ ಸರ್ಕಾರ ಕಳೆದ 6-8 ತಿಂಗಳುಗಳಿನಿಂದ ಬಾಡಿಗೆ ಹಣ ಬಿಡುಗಡೆ ಮಾಡದೆ ಬಾಕಿ ಇರಿಸಿಕೊಂಡಿದೆ. ಇದರಿಂದಾಗಿ ಬಾಡಿಗೆ ಕಟ್ಟಲು ಆಗದೆ ಅಂಗನವಾಡಿ ಕಾರ್ಯಕರ್ತೆಯರು ಗೋಳಾಡುತ್ತಿದ್ದಾರೆ. ಕೆಲವರು ಬಡ್ಡಿಗೆ ಸಾಲ ತಂದು ಬಾಡಿಗೆ ಕಟ್ಟುತ್ತಿದ್ದು, ಇನ್ನು ಕೆಲವರು ಪತಿ ದುಡಿದ ಹಣದಿಂದ ಬಾಡಿಗೆ ಪಾವತಿಸಿ ಅಂಗನವಾಡಿ ಕೇಂದ್ರಗಳನ್ನು ತೆರೆಯುತ್ತಿದ್ದಾರೆ.
ನಗರದಲ್ಲಿರುವ ಅಂಗನವಾಡಿ ಕಟ್ಟಡಕ್ಕೆ 4000 ಸಾವಿರ ರೂಪಾಯಿ ಬಾಡಿಗೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಟ್ಟಡಕ್ಕೆ 2000 ಸಾವಿರ ರೂಪಾಯಿ ಬಾಡಿಗೆ ನೀಡಬೇಕು. ಒಟ್ಟು 2,856 ಅಂಗನವಾಡಿಗಳ ಪೈಕಿ 808 ಬಾಡಿಗೆ ಕಟ್ಟಡಗಳ ಬಾಡಿಗೆ ಹಣ ಬಾಕಿ ಇರಿಸಲಾಗಿದೆ.
ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದ ಹಿನ್ನೆಲೆ ಅಧಿಕಾರಿಗಳು ಕೂಡ ಹೈರಾಣಾಗಿದ್ದಾರೆ. ಕೋಟ್ಯಂತರ ರೂಪಾಯಿ ಬಾಡಿಗೆ ಬಾಕಿಯಿಂದಾಗಿ ಅಂಗನವಾಡಿ ಕೇಂದ್ರಗಳು ಸಂಕಷ್ಟಕ್ಕೆ ಸಿಲುಕಿವೆ. ಕೂಡಲೇ ಬಾಡಿಗೆ ಹಣ ಬಿಡುಗಡೆ ಮಾಡುವಂತೆ ಕಾರ್ಯಕರ್ತೆಯರು ಆಗ್ರಹಿಸುತ್ತಿದ್ದಾರೆ.