ಬೆಂಗಳೂರು: ಕೇವಲ ಸುಳ್ಳನ್ನು ನುಡಿಯುವ ಬಿಜೆಪಿಯವರ ಹಾಗೂ ಮೋದಿ ಗ್ಯಾರಂಟಿ ಎಂಬ ಸುಳ್ಳು ಭರವಸೆಗೆ ಜನರು ಮರುಳಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ 100 ಹೊಸ ವಿನ್ಯಾಸ ಕರ್ನಾಟಕ ಸಾರಿಗೆ ಬಸ್ಸುಗಳನ್ನು ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದರು.
ಎಲ್ಲ ಜಾತಿ ಧರ್ಮಗಳ ಬಡವರಿಗೆ ಪಕ್ಷಾತೀತ, ಜಾತ್ಯಾತೀತವಾಗಿ ಎಲ್ಲ ಮಹಿಳೆಯರಿಗೂ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ. ಹಿಂದೆ ಯಾವ ಸರ್ಕಾರದವರು ಇಂತಹ ಪ್ರಯತ್ನ ಕೈಗೊಂಡಿರಲಿಲ್ಲ. ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಪ್ರದಾನಿ ಮೋದಿಯವರೂ ರಾಜ್ಯ ದಿವಾಳಿಯಾಗುತ್ತದೆ ಎಂದರು. ತಾವು 10 ವರ್ಷದಿಂದ ಅಧಿಕಾರದಲ್ಲಿದ್ದರೂ ಇಂತಹ ಗ್ಯಾರಂಟಿಗಳನ್ನು ಜನಗರಿಗೆ ನೀಡಲಿಲ್ಲ. ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತಂದರೆ ಭಾರತದ ಪ್ರತಿ ಕುಟುಂಬಕ್ಕೂ 15 ಲಕ್ಷ ನೀಡುವ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ, ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದರು. ಆದರೆ ಈ ಯಾವುದೇ ಭರವಸೆಗಳನ್ನು ಅವರು ಈಡೇರಿಸದ ಪ್ರಧಾನಿ ಮೋದಿಯವರು ಈಗ ಮೋದಿ ಗ್ಯಾರಂಟಿ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರ ಸುಳ್ಳುಗಳಿಗೆ ಜನರು ಮರುಳಾಗಬಾರದು ಎಂದರು.
ಗ್ಯಾರಂಟಿಗಳಿಗೆ ಬಿಟ್ಟಿ ಭಾಗ್ಯ ಎಂಬ ಬಿಜೆಪಿಯ ಮೂದಲಿಕೆ:
1.17 ಕೋಟಿ ಮಹಿಳಾ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಶಕ್ತಿ ಯೋಜನೆಯಡಿ 4530 ಕೋಟಿ ರೂ.ಗಳನ್ನು ವೆಚ್ಚವಾಗಿದೆ ಅನ್ನಭಾಗ್ಯದಡಿ 5 ಕೆಜಿ ಅಕ್ಕಿಯ ಜೊತೆ 5 ಕೆಜಿ ಅಕ್ಕಿಯ ಮೊತ್ತ , ಯುವನಿಧಿ ಯೋಜನೆಯಡಿ ಯುವಕರಿಗೆ ಆರ್ಥಿಕ ಸಹಾಯ ನೀಡುತ್ತಿದ್ದೇವೆ. ರಾಜ್ಯದ ಪ್ರತಿ ಕುಟುಂಬಕ್ಕೆ ಮಾಹೆಯಾನ 4 ರಿಂದ 5 ಸಾವಿರ ರೂ. ಆರ್ಥಿಕ ಸಹಾಯ ನೀಡುವ ಮೂಲಕ ಜನರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸಲಾಗಿದೆ. ನಮ್ಮ ಪಂಚಗ್ಯಾರಂಟಿಗಳು ರಾಜ್ಯದ 4.50 ಕೋಟಿ ಜನರಿಗೆ ತಲುಪುತ್ತಿದೆ. ನಮ್ಮ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯ ಎಂದು ಕೀಳುಮಟ್ಟದ ಮಾತುಗಳನ್ನು ಬಿಜೆಪಿಯವರು ಆಡಿದರು. ಬಡವರ ಬಗ್ಗೆ ಕಾಳಜಿ ಇದ್ದು, ರಾಜಕೀಯ ಇಚ್ಛಾಶಕ್ತಿ ಇದ್ದಾಗ ಮಾತ್ರ ಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಲು ಸಾಧ್ಯ. ಬಡವರಿಗೆ ಆರ್ಥಿಕ ಶಕ್ತಿ ತುಂಬುವುದು ಕಾಂಗ್ರೆಸ್ ನ ಬದ್ಧತೆ ಎಂದರು.