ರಾಯಚೂರು. ಮಕ್ಕಳ ಸಹಾಯವಾಣಿಗೆ ಬಂದ ದೂರಿನ ಅನ್ವಯ ಟಾಸ್ಕ್ ಪೋರ್ಸ್ ಸಮಿತಿ ತಂಡದೊಂದಿಗೆ ಮೆ. ಅನಿಕಾ ಆಟೋಮೊಬೈಲ್ಸ್, ಪ್ರೈವೆಟ್ ಲಿಮಿಟೆಡ್, (ಯಮಹ ಶೋರೂಂ) ಗೋಶಾಲಾ ರಸ್ತೆ, ಭಂಡಾರಿ ಆಸ್ಪತ್ರೆ ಪಕ್ಕದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ೧೯೮೬, ತಿದ್ದುಪಡಿ ಕಾಯ್ದೆ-೨೦೧೬ ರ ಅಡಿಯಲ್ಲಿ ತಪಾಸಣೆ, ದಾಳಿ ನಡೆಸಿದಾಗ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಕಿಶೋರ ಕಾರ್ಮಿಕನನ್ನು ರಕ್ಷಣೆ ಮಾಡಿ, ಬಾಲಕರ ಬಾಲಮಂದಿರ ಒಪ್ಪಿಸಲಾಗಿದೆ.
ಕೆಲಸಕ್ಕೆ ನೇಮಕಮಾಡಿಕೊಂಡಿದ್ದ ಮೆ. ಅನಿಕಾ ಆಟೋಮೊಬೈಲ್ಸ್, ಪ್ರೈವೆಟ್ ಲಿಮಿಟೆಡ್, (ಯಮಹ ಶೋರೂಂ)ನ ಮಾಲೀಕರ ವಿರುದ್ಧ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಸದರ ಬಜಾರ, ಪೊಲೀಸ್ ಠಾಣೆ ಪ್ರಕರಣ ದಾಖಲು ಮಾಡಲಾಗಿದೆ.
ದಾಳಿಯ ತಂಡದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮಂಜು ನಾಥರೆಡ್ಡಿ, ೨ನೇ ವೃತ್ತದ ಕಾರ್ಮಿಕ ನಿರೀಕ್ಷಕ ಪರಶುರಾಮ, ೧ನೇ ವೃತ್ತದ ಕಾರ್ಮಿಕ ನಿರೀಕ್ಷಕ ಮಹ್ಮದ್ ಉಮರ್ ಅಬ್ದುಲ್‌ಘನಿ, ಸಿಆರ್‌ಪಿ ಸಂಗಮೇಶ್ವರ, ಸಾಮಾಜಿಕ ಕಾರ್ಯಕರ್ತ ತಿಕ್ಕಯ್ಯ, ಮಕ್ಕಳ ಸಹಾಯವಾಣಿಯ ತಾಯ್‌ರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ೨೦೧೬ ರಂತೆ ೧೪ ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಒಂದು ವೇಳೆ ದುಡಿಸಿಕೊಂಡಲ್ಲಿ ರೂ. ೫೦,೦೦೦/- ದಂಡ ಹಾಗೂ ೨ ವರ್ಷ ಜೈಲು ಶಿಕ್ಷೆ ಇರುತ್ತದೆ. ವಾಹನಗಳಲ್ಲಿ ಮಕ್ಕಳನ್ನು ಕೃಷಿ ಚಟುವಟಿಕೆಗಳಿಗಾಗಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.